ರಾತ್ರಿ ಹಗಲುಗಳ ಬದಲಾವಣೆಯಲ್ಲೂ, ಅಲ್ಲಾಹನು ಆಕಾಶದಿಂದ ಜೀವನಾಧಾರವನ್ನು ಇಳಿಸಿ ಅದರಿಂದ ಭೂಮಿಯನ್ನು ಅದರ ನಿರ್ಜೀವಾವಸ್ಥೆಯ ಬಳಿಕ ಸಜೀವಗೊಳಿಸುವುದರಲ್ಲೂ, ಮಾರುತಗಳ ಬದಲಾವಣೆಯಲ್ಲೂ ವಿವೇಕವುಳ್ಳ ಜನರಿಗೆ ಹಲವಾರು ನಿದರ್ಶನಗಳಿವೆ.
ಇವು ಅಲ್ಲಾಹನ ಸೂಕ್ತಿಗಳಾಗಿವೆ. ಇವುಗಳನ್ನು ನಾವು ನಿಮಗೆ ಸತ್ಯದೊಂದಿಗೆ ಓದಿ ಹೇಳುತ್ತಿದ್ದೇವೆ. ಇನ್ನು ಅವರು ಅಲ್ಲಾಹನ ಹಾಗೂ ಅವನ ಸೂಕ್ತಿಗಳ ಬಳಿಕ ಇನ್ನಾವ ವೃತ್ತಾಂತದಲ್ಲಿ ವಿಶ್ವಾಸವಿಡುವರು?
ಅವನ ಮುಂದೆ ಅಲ್ಲಾಹನ ಸೂಕ್ತಿಗಳನ್ನು ಓದಿ ಹೇಳಲಾದರೆ ಅದನ್ನು ಕೇಳಿಸಿಕೊಂಡ ಬಳಿಕವೂ ದರ್ಪತೋರುತ್ತಾ ತಾನು ಅವುಗಳನ್ನು ಕೇಳಿಯೇ ಇಲ್ಲವೆಂಬAತೆ ಹಠ ಸಾಧಿಸಿ ನಿಲ್ಲುತ್ತಾನೆ. ಆದ್ದರಿಂದ ನೀವು ಅವನಿಗೆ ವೇದನಾಜನಕ ಯಾತನೆಯ ಶುಭ ವಾರ್ತೆಯನ್ನು ಕೊಡಿರಿ.
ಅವರ ಮುಂದೆ ನರಕವಿದೆ. ಅವರು ಸಂಪಾದಿಸಿದ್ದಾಗಲಿ, ಅಲ್ಲಾಹನ ಹೊರತು ತಮ್ಮ ರಕ್ಷಕಮಿತ್ರರನ್ನಾಗಿ ಮಾಡಿಕೊಂಡವರಾಗಲಿ ಅವರಿಗೆ ಸ್ವಲ್ಪವೂ ಪ್ರಯೋಜನ ನೀಡಲಾರರು. ಅವರಿಗೆ ಮಹಾ ಯಾತನೆಯಿರುವುದು.
ನಿಮಗೆ ಸಮುದ್ರವನ್ನು ಅಧೀನಗೊಳಿಸಿಕೊಟ್ಟವನು. ಅಲ್ಲಾಹನಾಗಿರುವನು. ಅವನ ಆದೇಶದಿಂದ ಅದರಲ್ಲಿ ಹಡಗುಗಳು ಚಲಿಸಲೆಂದೂ, ನೀವು ಅವನ ಅನುಗ್ರಹವನ್ನು ಅರಸಲೆಂದೂ ಮತ್ತು ಕೃತಜ್ಞತೆ ಸಲ್ಲಿಸಲೆಂದಾಗಿದೆ.
ಆಕಾಶ ಮತ್ತು ಭೂಮಿಯಲ್ಲಿರುವ ಪ್ರತಿಯೊಂದು ವಸ್ತುವನ್ನೂ ಅವನು ತನ್ನ ಕಡೆಯಿಂದ ನಿಮಗಾಗಿ ಅಧೀನಗೊಳಿಸಿ ಕೊಟ್ಟಿರುವನು. ಖಂಡಿತವಾಗಿಯು ಚಿಂತಿಸುವ ಜನರಿಗೆ ಇವುಗಳಲ್ಲಿ ಹಲವಾರು ನಿದರ್ಶನಗಳಿವೆ.