ವ್ಯಭಿಚಾರ ಮಾಡುವ ಸ್ತ್ರೀ-ಪುರುಷರಲ್ಲಿ ಪ್ರತಿಯೊಬ್ಬರಿಗೂ ನೂರು ಚಡಿಯೇಟು ನೀಡಿರಿ.[1] ಅವರ ಮೇಲೆ ಅಲ್ಲಾಹನ ಕಾನೂನನ್ನು ಜಾರಿಗೊಳಿಸುವ ವಿಷಯದಲ್ಲಿ ನೀವು ಸ್ವಲ್ಪವೂ ಅನುಕಂಪ ತೋರಬಾರದು. ನಿಮಗೆ ಅಲ್ಲಾಹನಲ್ಲಿ ಮತ್ತು ಅಂತ್ಯದಿನದಲ್ಲಿ ವಿಶ್ವಾಸವಿದ್ದರೆ. ಅವರಿಗೆ ಶಿಕ್ಷೆ ನೀಡುವಾಗ ಸತ್ಯವಿಶ್ವಾಸಿಗಳ ಒಂದು ಗುಂಪು ಅಲ್ಲಿ ಉಪಸ್ಥಿತರಿರಲಿ.
[1] ವ್ಯಭಿಚಾರ ಮಾಡಿದವರು ಸ್ವಯಂ ತಪ್ಪೊಪ್ಪಿಕೊಂಡರೆ, ಅಥವಾ ಅವರು ವ್ಯಭಿಚಾರ ಮಾಡಿದ್ದನ್ನು ನೋಡಿದ್ದೇವೆಂದು ನಾಲ್ಕು ಮಂದಿ ಸಾಕ್ಷಿ ನುಡಿದರೆ ಮಾತ್ರ ವ್ಯಭಿಚಾರದ ಶಿಕ್ಷೆ ಜಾರಿ ಮಾಡಲಾಗುತ್ತದೆ. ಇಲ್ಲಿ ಹೇಳಿರುವುದು ವ್ಯಭಿಚಾರ ಮಾಡುವ ಅವಿವಾಹಿತ ಪುರುಷ ಮತ್ತು ಮಹಿಳೆಗೆ ನೀಡಲಾಗುವ ಶಿಕ್ಷೆ. ವ್ಯಭಿಚಾರ ಮಾಡಿದವರು ವಿವಾಹಿತರಾಗಿದ್ದರೆ ಅವರನ್ನು ಕಲ್ಲೆಸೆದು ಸಾಯಿಸಲಾಗುತ್ತದೆ.
ವ್ಯಭಿಚಾರಿ ಪುರುಷನು ವ್ಯಭಿಚಾರಿ ಮಹಿಳೆ ಅಥವಾ ಬಹುದೇವಾರಾಧಕಿ ಮಹಿಳೆಯ ಹೊರತಾಗಿ ಬೇರೆ ಯಾರನ್ನೂ ವಿವಾಹವಾಗುವುದಿಲ್ಲ. ವ್ಯಭಿಚಾರಿ ಮಹಿಳೆ ವ್ಯಭಿಚಾರಿ ಪುರುಷ ಅಥವಾ ಬಹುದೇವಾರಾಧಕ ಪುರುಷನ ಹೊರತಾಗಿ ಬೇರೆ ಯಾರನ್ನೂ ವಿವಾಹವಾಗುವುದಿಲ್ಲ. ಸತ್ಯವಿಶ್ವಾಸಿಗಳಿಗೆ ಇಂತಹವರನ್ನು ವಿವಾಹವಾಗುವುದು ನಿಷಿದ್ಧವಾಗಿದೆ.
ಪರಿಶುದ್ಧ ಮಹಿಳೆಯರ ಮೇಲೆ ವ್ಯಭಿಚಾರದ ಆರೋಪ ಮಾಡಿ, ನಂತರ (ಅದನ್ನು ಸಾಬೀತುಪಡಿಸಲು) ನಾಲ್ಕು ಸಾಕ್ಷಿಗಳನ್ನು ತರಲು ಸಾಧ್ಯವಾಗದವರಿಗೆ ಎಂಬತ್ತು ಚಡಿಯೇಟು ನೀಡಿರಿ. ಅವರ ಸಾಕ್ಷ್ಯವನ್ನು ಎಂದಿಗೂ ಸ್ವೀಕರಿಸಬೇಡಿ. ಅವರೇ ನಿಜವಾದ ದುಷ್ಕರ್ಮಿಗಳು.
ತಮ್ಮ ಪತ್ನಿಯರ ಮೇಲೆ ವ್ಯಭಿಚಾರದ ಆರೋಪ ಮಾಡುವವರು ಮತ್ತು ಅದಕ್ಕೆ ಸ್ವತಃ ಅವರ ಹೊರತು ಬೇರೆ ಸಾಕ್ಷಿಯಿಲ್ಲದವರು ಯಾರೋ—ಅವರಲ್ಲಿ ಪ್ರತಿಯೊಬ್ಬರೂ (ತಮ್ಮ ಆರೋಪವನ್ನು ಸಾಬೀತುಪಡಿಸಲು) “ಖಂಡಿತವಾಗಿಯೂ ನಾನು ಸತ್ಯ ಹೇಳುವವರಲ್ಲೇ ಸೇರಿದ್ದೇನೆ” ಎಂದು ಅಲ್ಲಾಹನ ಹೆಸರಲ್ಲಿ ನಾಲ್ಕು ಬಾರಿ ಆಣೆ ಮಾಡಿ ಹೇಳಬೇಕು.
ನಿಮ್ಮ ಮೇಲೆ ಅಲ್ಲಾಹನ ಔದಾರ್ಯ ಮತ್ತು ದಯೆಯಿಲ್ಲದಿರುತ್ತಿದ್ದರೆ (ನಿಮಗೆ ಬಹಳ ಕಷ್ಟಗಳನ್ನು ಅನುಭವಿಸಬೇಕಾಗಿ ಬರುತ್ತಿತ್ತು). ನಿಶ್ಚಯವಾಗಿಯೂ ಅಲ್ಲಾಹು ಪಶ್ಚಾತ್ತಾಪ ಸ್ವೀಕರಿಸುವವನು ಮತ್ತು ವಿವೇಕಪೂರ್ಣನಾಗಿದ್ದಾನೆ.
ನಿಶ್ಚಯವಾಗಿಯೂ ಆ ಸುಳ್ಳು ಸುದ್ದಿಯನ್ನು ತಂದವರು ನಿಮ್ಮಲ್ಲೇ ಇರುವ ಒಂದು ಗುಂಪಿನವರಾಗಿದ್ದಾರೆ. ಅದು ನಿಮಗೆ ಕೆಡುಕೆಂದು ಭಾವಿಸಬೇಡಿ. ಬದಲಿಗೆ, ಅದು ನಿಮಗೆ ಒಳಿತಾಗಿದೆ. ಅವರಲ್ಲಿ ಪ್ರತಿಯೊಬ್ಬರಿಗೂ ಅವರು ಮಾಡಿದ ಪಾಪಕ್ಕೆ ತಕ್ಕಂತೆ ಶಿಕ್ಷೆಯಿದೆ. ಅವರಲ್ಲಿ ಹಿರಿಯ ಪಾತ್ರ ವಹಿಸಿದವನಾರೋ ಅವನಿಗೆ ಘೋರ ಶಿಕ್ಷೆಯಿದೆ.[1]
[1] ಇಲ್ಲಿ ಹೇಳಿರುವುದು ಪ್ರವಾದಿ ಮುಹಮ್ಮದರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಪತ್ನಿ ಆಯಿಶರ ಮೇಲೆ ವ್ಯಭಿಚಾರ ಆರೋಪ ಹೊರಿಸಿದವರ ಬಗ್ಗೆ. ಕಪಟವಿಶ್ವಾಸಿಗಳ ಮುಖಂಡ ಅಬ್ದುಲ್ಲಾ ಬಿನ್ ಉಬೈ ಈ ಅಪಪ್ರಚಾರದಲ್ಲಿ ಪ್ರಮುಖ ಪಾತ್ರ ವಹಿಸಿದ್ದನು.
ಆ ಸುದ್ದಿಯನ್ನು ಕೇಳಿದಾಗ ಸತ್ಯವಿಶ್ವಾಸಿ ಪುರುಷರು ಮತ್ತು ಮಹಿಳೆಯರು ತಮ್ಮದೇ ಜನರ ಬಗ್ಗೆ ಒಳ್ಳೆಯ ಅಭಿಪ್ರಾಯವನ್ನಿಟ್ಟುಕೊಂಡು, “ಇದು ಸ್ಪಷ್ಟ ಸುಳ್ಳಾರೋಪವಾಗಿದೆ” ಎಂದು ಏಕೆ ಹೇಳಲಿಲ್ಲ?
ನಿಮ್ಮ ಮೇಲೆ ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಅಲ್ಲಾಹನ ಔದಾರ್ಯ ಮತ್ತು ದಯೆಯಿಲ್ಲದಿರುತ್ತಿದ್ದರೆ, ನೀವು ತೊಡಗಿಕೊಂಡ ಈ ಚರ್ಚೆಯ ಕಾರಣದಿಂದಾಗಿ ಘೋರ ಶಿಕ್ಷೆಯು ನಿಮಗೆ ಸ್ಪರ್ಶಿಸುತ್ತಿತ್ತು.
ನೀವು ಅದನ್ನು ನಿಮ್ಮ ನಾಲಗೆಗಳಿಂದ ಸ್ವೀಕರಿಸುತ್ತಲೂ ಮತ್ತು ನಿಮಗೆ ಯಾವುದೇ ಜ್ಞಾನವಿಲ್ಲದ ಆ ವಿಷಯವನ್ನು ನಿಮ್ಮ ಬಾಯಿ ಮೂಲಕ ಮಾತನಾಡುತ್ತಲೂ ಇದ್ದ ಸಂದರ್ಭ(ವನ್ನು ಸ್ಮರಿಸಿ). ನೀವು ಅದನ್ನು ಕ್ಷುಲ್ಲಕವೆಂದು ಭಾವಿಸಿರಬಹುದು. ಆದರೆ ಅಲ್ಲಾಹನ ದೃಷ್ಟಿಯಲ್ಲಿ ಅದು ಗಂಭೀರ ವಿಷಯವಾಗಿದೆ.
ಸತ್ಯವಿಶ್ವಾಸಿಗಳ ನಡುವೆ ಅಶ್ಲೀಲವು ಪ್ರಚಾರವಾಗಬೇಕೆಂದು ಬಯಸುವವರು ಯಾರೋ ಅವರಿಗೆ ಇಹಲೋಕದಲ್ಲಿ ಮತ್ತು ಪರಲೋಕದಲ್ಲಿ ಯಾತನಾಮಯ ಶಿಕ್ಷೆಯಿದೆ. ಅಲ್ಲಾಹು ಎಲ್ಲವನ್ನೂ ತಿಳಿದಿದ್ದಾನೆ. ಆದರೆ ನೀವು ತಿಳಿದಿಲ್ಲ.
ನಿಮ್ಮ ಮೇಲೆ ಅಲ್ಲಾಹನ ಔದಾರ್ಯ ಮತ್ತು ದಯೆಯಿಲ್ಲದಿರುತ್ತಿದ್ದರೆ (ನಿಮಗೆ ಬಹಳ ಕಷ್ಟಗಳನ್ನು ಅನುಭವಿಸಬೇಕಾಗಿ ಬರುತ್ತಿತ್ತು). ನಿಶ್ಚಯವಾಗಿಯೂ ಅಲ್ಲಾಹು ಅನುಕಂಪ ತೋರುವವನು ಮತ್ತು ಮತ್ತು ದಯೆ ತೋರುವವನಾಗಿದ್ದಾನೆ.
ಓ ಸತ್ಯವಿಶ್ವಾಸಿಗಳೇ! ನೀವು ಶೈತಾನನ ಹೆಜ್ಜೆಗಳನ್ನು ಹಿಂಬಾಲಿಸಬೇಡಿ. ಯಾರು ಶೈತಾನನ ಹೆಜ್ಜೆಗಳನ್ನು ಹಿಂಬಾಲಿಸುತ್ತಾನೋ—ನಿಶ್ಚಯವಾಗಿಯೂ ಶೈತಾನನು (ಅವನಿಗೆ) ಅಶ್ಲೀಲತೆ ಮತ್ತು ದುಷ್ಕೃತ್ಯಗಳನ್ನು ಮಾತ್ರ ಮಾಡಲು ಆದೇಶಿಸುತ್ತಾನೆ. ನಿಮ್ಮ ಮೇಲೆ ಅಲ್ಲಾಹನ ಔದಾರ್ಯ ಮತ್ತು ದಯೆಯಿಲ್ಲದಿರುತ್ತಿದ್ದರೆ ನಿಮ್ಮಲ್ಲಿ ಯಾರೂ ಯಾವತ್ತೂ ಪರಿಶುದ್ಧರಾಗುತ್ತಿರಲಿಲ್ಲ. ಆದರೆ ಅಲ್ಲಾಹು ಅವನು ಬಯಸುವವರನ್ನು ಪರಿಶುದ್ಧಗೊಳಿಸುತ್ತಾನೆ. ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
ನಿಮ್ಮಲ್ಲಿರುವ ಶ್ರೇಷ್ಠರು ಮತ್ತು ಸಂಪನ್ನರು ತಮ್ಮ ಸಂಬಂಧಿಕರಿಗೆ, ಬಡವರಿಗೆ ಮತ್ತು ಅಲ್ಲಾಹನ ಮಾರ್ಗದಲ್ಲಿ ವಲಸೆ (ಹಿಜ್ರ) ಮಾಡಿದವರಿಗೆ ಏನೂ ಕೊಡುವುದಿಲ್ಲವೆಂದು ಪ್ರತಿಜ್ಞೆ ಮಾಡದಿರಲಿ.[1] ಅವರು ಅವರನ್ನು ಮನ್ನಿಸಲಿ ಮತ್ತು (ಅವರ ತಪ್ಪುಗಳನ್ನು) ನಿರ್ಲಕ್ಷಿಸಲಿ. ಅಲ್ಲಾಹು ನಿಮ್ಮನ್ನು ಕ್ಷಮಿಸಬೇಕೆಂದು ನೀವು ಆಸೆ ಪಡುವುದಿಲ್ಲವೇ? ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
[1] ಮಿಸ್ತಹ್ ಎಂಬ ಹೆಸರಿನ ಸಹಾಬಿ ಅಚಾನಕ್ಕಾಗಿ ಈ ಅಪಪ್ರಚಾರದಲ್ಲಿ ಭಾಗಿಯಾಗಿದ್ದರು. ಇವರಿಗೆ ಆಯಿಶರ ತಂದೆ ಅಬೂಬಕರ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ಖರ್ಚಿಗೆ ನೀಡುತ್ತಿದ್ದರು. ಈ ವಿಷಯ ತಿಳಿದಾಗ ಇನ್ನು ಮುಂದೆ ಅವರಿಗೆ ಖರ್ಚಿಗೆ ಏನೂ ಕೊಡುವುದಿಲ್ಲವೆಂದು ಅಬೂಬಕರ್ (ಅವರ ಬಗ್ಗೆ ಅಲ್ಲಾಹು ಸಂಪ್ರೀತನಾಗಲಿ) ಪ್ರತಿಜ್ಞೆ ಮಾಡಿದರು.
ಪರಿಶುದ್ಧರಾದ, (ವ್ಯಭಿಚಾರದ ಬಗ್ಗೆ) ಯೋಚಿಸಿಯೂ ಇರದ ಸತ್ಯವಿಶ್ವಾಸಿ ಮಹಿಳೆಯರ ಮೇಲೆ ವ್ಯಭಿಚಾರದ ಆರೋಪ ಹೊರಿಸುವವರು ಯಾರೋ—ಅವರನ್ನು ಇಹಲೋಕದಲ್ಲೂ ಪರಲೋಕದಲ್ಲೂ ಶಪಿಸಲಾಗಿದೆ. ಅವರಿಗೆ ಘೋರ ಶಿಕ್ಷೆಯಿದೆ.
ನೀಚ ಮಹಿಳೆಯರು ನೀಚ ಪುರುಷರಿಗೆ ಮತ್ತು ನೀಚ ಪುರುಷರು ನೀಚ ಮಹಿಳೆಯರಿಗೆ. ಪರಿಶುದ್ಧ ಮಹಿಳೆಯರು ಪರಿಶುದ್ಧ ಪುರುಷರಿಗೆ ಮತ್ತು ಪರಿಶುದ್ಧ ಪುರುಷರು ಪರಿಶುದ್ಧ ಮಹಿಳೆಯರಿಗೆ. ಅವರು ಮಾಡುತ್ತಿರುವ ಎಲ್ಲಾ (ನೀಚ) ಆರೋಪಗಳಿಂದ ಈ ಪರಿಶುದ್ಧ ಜನರು ಮುಕ್ತರಾಗಿದ್ದಾರೆ. ಇವರಿಗೆ ಕ್ಷಮೆ ಮತ್ತು ಗೌರವಾನ್ವಿತ ಉಪಜೀವನವಿದೆ.
ಓ ಸತ್ಯವಿಶ್ವಾಸಿಗಳೇ! ನಿಮ್ಮ ಮನೆಗಳನ್ನು ಬಿಟ್ಟು ಬೇರೆ ಮನೆಗಳನ್ನು, ಆ ಮನೆಯವರಿಂದ ಅನುಮತಿ ಪಡೆದು ಅವರಿಗೆ ಸಲಾಮ್ ಹೇಳುವ ತನಕ ಪ್ರವೇಶಿಸಬೇಡಿ. ಅದು ನಿಮಗೆ ಉತ್ತಮವಾಗಿದೆ. ನೀವು ಉಪದೇಶ ಪಡೆಯುವುದಕ್ಕಾಗಿ.
ಅಲ್ಲಿ ಯಾರೂ ಇಲ್ಲದಿದ್ದರೂ ಸಹ ನಿಮಗೆ ಅನುಮತಿ ಸಿಗುವ ತನಕ ಆ ಮನೆಗಳನ್ನು ಪ್ರವೇಶಿಸಬೇಡಿ. ನಿಮ್ಮೊಡನೆ ಹಿಂದಿರುಗಿ ಹೋಗಲು ಹೇಳಲಾದರೆ ಹಿಂದಿರುಗಿರಿ. ಅದು ನಿಮಗೆ ಅತ್ಯಂತ ಪರಿಶುದ್ಧವಾಗಿದೆ. ಅಲ್ಲಾಹು ನೀವು ಮಾಡುತ್ತಿರುವುದನ್ನು ತಿಳಿಯುತ್ತಾನೆ.
ಜನವಾಸವಿಲ್ಲದ ಮತ್ತು ನಿಮ್ಮ ಯಾವುದಾದರೂ ಬಳಕೆಗೆ ಇರುವಂತಹ ಮನೆಗಳನ್ನು (ಅನುಮತಿ ವಿನಾ) ಪ್ರವೇಶಿಸುವುದರಲ್ಲಿ ತಪ್ಪಿಲ್ಲ. ನೀವು ಬಹಿರಂಗಪಡಿಸುವುದನ್ನು ಮತ್ತು ರಹಸ್ಯವಾಗಿಡುವುದನ್ನು ಅಲ್ಲಾಹು ತಿಳಿಯುತ್ತಾನೆ.
(ಪ್ರವಾದಿಯವರೇ) ಸತ್ಯವಿಶ್ವಾಸಿಗಳೊಂದಿಗೆ ತಮ್ಮ ದೃಷ್ಟಿಗಳನ್ನು ತಗ್ಗಿಸಲು ಮತ್ತು ತಮ್ಮ ಗುಹ್ಯಭಾಗಗಳನ್ನು ರಕ್ಷಿಸಲು ಹೇಳಿರಿ. ಅದು ಅವರಿಗೆ ಅತ್ಯಂತ ಪರಿಶುದ್ಧವಾಗಿದೆ. ನಿಶ್ಚಯವಾಗಿಯೂ ಅವರು ಮಾಡುವುದೆಲ್ಲವನ್ನೂ ಅಲ್ಲಾಹು ಸೂಕ್ಷ್ಮವಾಗಿ ತಿಳಿಯುತ್ತಾನೆ.
ಸತ್ಯವಿಶ್ವಾಸಿ ಮಹಿಳೆಯರೊಂದಿಗೆ ತಮ್ಮ ದೃಷ್ಟಿಗಳನ್ನು ತಗ್ಗಿಸಲು ಮತ್ತು ತಮ್ಮ ಗುಹ್ಯಭಾಗಗಳನ್ನು ರಕ್ಷಿಸಲು ಹೇಳಿರಿ. ಅವರು ತಮ್ಮ ಸೌಂದರ್ಯದಿಂದ ಏನನ್ನೂ ಪ್ರದರ್ಶಿಸದಿರಲಿ—(ಅನಿವಾರ್ಯವಾಗಿ) ಪ್ರಕಟವಾಗುವ ಭಾಗಗಳ ಹೊರತು. ಅವರು ತಮ್ಮ ಎದೆಗಳ ಮೇಲೆ ಶಿರವಸ್ತ್ರಗಳನ್ನು ಹಾಕಿಕೊಳ್ಳಲಿ. ಅವರು ತಮ್ಮ ಸೌಂದರ್ಯವನ್ನು ಅವರ ಗಂಡಂದಿರು, ತಂದೆಯಂದಿರು, ಗಂಡನ ತಂದೆಯಂದಿರು, ಪುತ್ರರು, ಗಂಡನ ಪುತ್ರರು, ಸಹೋದರರು, ಸಹೋದರರ ಪುತ್ರರು, ಸಹೋದರಿಯರ ಪುತ್ರರು, ಮುಸ್ಲಿಮ್ ಮಹಿಳೆಯರು, ಅವರ ಅಧೀನದಲ್ಲಿರುವ ಗುಲಾಮರು, ಲೈಂಗಿಕಾಸಕ್ತಿಯಿಲ್ಲದ ಪುರುಷ ಸೇವಕರು, ಮಹಿಳೆಯರ ಖಾಸಗಿ ಭಾಗಗಳ ಬಗ್ಗೆ ಇನ್ನೂ ತಿಳಿದಿರದ ಮಕ್ಕಳು ಮುಂತಾದವರ ಹೊರತು ಬೇರೆ ಯಾರಿಗೂ ತೋರಿಸದಿರಲಿ. ಮರೆಯಾಗಿರುವ ತಮ್ಮ ಸೌಂದರ್ಯವು ಇತರರಿಗೆ ತಿಳಿಯುವಂತೆ ಮಾಡಲು ಅವರು ಕಾಲನ್ನು ನೆಲಕ್ಕೆ ಬಡಿದು ನಡೆಯದಿರಲಿ. ಓ ಸತ್ಯವಿಶ್ವಾಸಿಗಳೇ! ನೀವೆಲ್ಲರೂ ಅಲ್ಲಾಹನ ಬಳಿಗೆ ಪಶ್ಚಾತ್ತಾಪಪಟ್ಟು ಮರಳಿರಿ. ನೀವು ಯಶಸ್ವಿಯಾಗುವುದಕ್ಕಾಗಿ.
ನಿಮ್ಮಲ್ಲಿ ಅವಿವಾಹಿತರಾಗಿರುವ ಪುರುಷರು ಮತ್ತು ಮಹಿಳೆಯರಿಗೆ ವಿವಾಹ ಮಾಡಿಸಿರಿ. ನಿಮ್ಮ ನೀತಿವಂತ ಗುಲಾಮರು ಮತ್ತು ಗುಲಾಮ ಸ್ತ್ರೀಯರಿಗೂ ವಿವಾಹ ಮಾಡಿಸಿರಿ. ಅವರು ಬಡವರಾಗಿದ್ದರೆ ಅಲ್ಲಾಹು ತನ್ನ ಔದಾರ್ಯದಿಂದ ಅವರಿಗೆ ಶ್ರೀಮಂತಿಕೆಯನ್ನು ನೀಡುವನು. ಅಲ್ಲಾಹು ವಿಶಾಲನು ಮತ್ತು ಸರ್ವಜ್ಞನಾಗಿದ್ದಾನೆ.
ವಿವಾಹವಾಗುವ ಸಾಮರ್ಥ್ಯವಿಲ್ಲದವರು—ಅಲ್ಲಾಹು ಅವರಿಗೆ ತನ್ನ ಔದಾರ್ಯದಿಂದ ಶ್ರೀಮಂತಿಕೆಯನ್ನು ಒದಗಿಸುವ ತನಕ ತಮ್ಮ ಪರಿಶುದ್ಧತೆಯನ್ನು ಕಾಪಾಡಿಕೊಳ್ಳಲಿ. ನಿಮ್ಮ ಅಧೀನದಲ್ಲಿರುವ ಗುಲಾಮರಲ್ಲಿ ಯಾರಾದರೂ ನಿಮಗೆ ಏನಾದರೂ ನೀಡಿ ಸ್ವತಂತ್ರರಾಗಲು ಬಯಸಿದರೆ, ಅವರಲ್ಲಿ ಒಳಿತಿದೆಯೆಂದು ನಿಮಗೆ ತಿಳಿದು ಬಂದರೆ ಅವರನ್ನು ಸ್ವತಂತ್ರಗೊಳಿಸಿರಿ.[1] ಅಲ್ಲಾಹು ನಿಮಗೆ ನೀಡಿದ ಸಂಪತ್ತಿನಿಂದ ಅವರಿಗೂ ಸ್ವಲ್ಪ ನೀಡಿರಿ. ನಿಮ್ಮ ಗುಲಾಮ ಸ್ತ್ರೀಯರು ಪರಿಶುದ್ಧರಾಗಿ ಬದುಕಲು ಬಯಸಿದರೆ, ಐಹಿಕ ಲಾಭಗಳನ್ನು ದೃಷ್ಟಿಯಲ್ಲಿಟ್ಟು ಅವರನ್ನು ಬಲವಂತವಾಗಿ ವ್ಯಭಿಚಾರಕ್ಕೆ ತಳ್ಳಬೇಡಿ.[2] ಯಾರಾದರೂ ಅವರನ್ನು ಬಲವಂತಪಡಿಸಿದರೆ, ಆ ಗುಲಾಮ ಸ್ತ್ರೀಯರು ಬಲವಂತದಿಂದ ತಪ್ಪೆಸಗಿದ ಬಳಿಕವೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
[1] ನಾನು ಇಂತಿಷ್ಟು ಮೊತ್ತ ಹಣವನ್ನು ಸಂಗ್ರಹಿಸಿಕೊಟ್ಟರೆ ನೀವು ನನ್ನನ್ನು ಸ್ವತಂತ್ರಗೊಳಿಸಬೇಕೆಂದು ಗುಲಾಮರು ತಮ್ಮ ಯಜಮಾನರೊಡನೆ ವಿಮೋಚನಾ ಒಪ್ಪಂದ ಮಾಡುತ್ತಿದ್ದರು. ಅವರಲ್ಲಿ ಒಳಿತಿದೆಯೆಂದು ನಿಮಗೆ ತಿಳಿದು ಬಂದರೆ ಎಂಬ ವಚನದ ಅರ್ಥವೇನೆಂದರೆ, ಆ ಗುಲಾಮರಲ್ಲಿ ಸತ್ಯವಂತಿಕೆ ಮತ್ತು ಪ್ರಾಮಾಣಿಕತೆಯಿದೆಯೆಂದು ನಿಮಗೆ ತಿಳಿದು ಬಂದರೆ, ಅಥವಾ ಅವರು ಯಾವುದಾದರೂ ವೃತ್ತಿಯಲ್ಲಿ ತರಬೇತಿ ಪಡೆದಿದ್ದು ಆ ವೃತ್ತಿ ಮಾಡಿ ನಿಮ್ಮ ಹಣವನ್ನು ಪಾವತಿಸುವರೆಂಬ ಭರವಸೆ ನಿಮಗಿದ್ದರೆ ಅವರನ್ನು ಸ್ವತಂತ್ರಗೊಳಿಸಿರಿ ಎಂದರ್ಥ. [2] ಇಸ್ಲಾಮೀ ಪೂರ್ವ ಕಾಲದಲ್ಲಿ (ಅಜ್ಞಾನಕಾಲದಲ್ಲಿ) ಯಜಮಾನರು ತಮ್ಮ ಗುಲಾಮ ಸ್ತ್ರೀಯರನ್ನು ವೇಶ್ಯಾವಾಟಿಕೆಗೆ ತಳ್ಳಿ ಆದಾಯ ಗಳಿಸುತ್ತಿದ್ದರು. ಮುಸಲ್ಮಾನರು ತಮ್ಮ ಅಧೀನದಲ್ಲಿರುವ ಗುಲಾಮಸ್ತ್ರೀಯರಿಂದ ಇಂತಹ ಕೆಲಸಗಳನ್ನು ಮಾಡಿಸಬಾರದೆಂದು ಇಲ್ಲಿ ಆದೇಶ ನೀಡಲಾಗಿದೆ.
ನಿಶ್ಚಯವಾಗಿಯೂ ನಾವು ನಿಮಗೆ ಸ್ಪಷ್ಟವಾದ ವಚನಗಳನ್ನು ಅವತೀರ್ಣಗೊಳಿಸಿದ್ದೇವೆ. ನಿಮಗಿಂತ ಮೊದಲು ಬದುಕಿದ್ದ ಜನರ ಸಮಾಚಾರಗಳನ್ನು ಮತ್ತು ದೇವಭಯವುಳ್ಳವರಿಗೆ ಉಪದೇಶವನ್ನು (ಅವತೀರ್ಣಗೊಳಿಸಿದ್ದೇವೆ).
ಅಲ್ಲಾಹು ಭೂಮ್ಯಾಕಾಶಗಳ ಬೆಳಕಾಗಿದ್ದಾನೆ. ಅವನ ಬೆಳಕಿನ ಉದಾಹರಣೆಯು (ಗೋಡೆಯಲ್ಲಿ ದೀಪವನ್ನಿಡಲು ನಿರ್ಮಿಸಲಾದ) ಒಂದು ಮಾಡದಂತೆ. ಅದರಲ್ಲಿ ಒಂದು ದೀಪವಿದೆ. ದೀಪವು ಗಾಜಿನ ಆವರಣದ ಒಳಗಿದೆ. ಆ ಗಾಜು ಬೆಳ್ಳಗೆ ಹೊಳೆಯುವ ಒಂದು ನಕ್ಷತ್ರವೋ ಎಂಬಂತಿದೆ. ಆ ದೀಪವು ಸಮೃದ್ಧವಾದ ಓಲಿವ್ ಮರದ ಎಣ್ಣೆಯಿಂದ ಉರಿಯುತ್ತಿದೆ. ಆ ಮರವು ಪೂರ್ವಭಾಗದ್ದೋ ಪಶ್ಚಿಮ ಭಾಗದ್ದೋ ಅಲ್ಲ. ಬೆಂಕಿ ಆ ಎಣ್ಣೆಯನ್ನು ಸ್ಪರ್ಶಿಸದಿದ್ದರೂ ಸಹ ಅದು (ಎಣ್ಣೆ) ಹೆಚ್ಚು-ಕಮ್ಮಿ ಹೊಳೆಯುತ್ತಲೇ ಇದೆ. ಬೆಳಕಿನ ಮೇಲೆ ಬೆಳಕು. ಅಲ್ಲಾಹು ಅವನು ಬಯಸುವವರಿಗೆ ತನ್ನ ಬೆಳಕಿನ ಕಡೆಗೆ ದಾರಿ ತೋರಿಸುತ್ತಾನೆ. ಜನರು (ಅರ್ಥಮಾಡಿಕೊಳ್ಳುವುದಕ್ಕಾಗಿ) ಅಲ್ಲಾಹು ಉದಾಹರಣೆಗಳನ್ನು ನೀಡುತ್ತಿದ್ದಾನೆ. ಅಲ್ಲಾಹು ಎಲ್ಲಾ ವಿಷಯಗಳ ಬಗ್ಗೆಯೂ ತಿಳಿದವನಾಗಿದ್ದಾನೆ.
ಪುರುಷರು—ಅವರನ್ನು ವ್ಯಾಪಾರ ಮತ್ತು ಕ್ರಯ-ವಿಕ್ರಯಗಳು ಅಲ್ಲಾಹನನ್ನು ಸ್ಮರಿಸುವುದು, ನಮಾಝ್ ಸಂಸ್ಥಾಪಿಸುವುದು, ಝಕಾತ್ ನೀಡುವುದು ಮುಂತಾದವುಗಳ ಕಡೆಗೆ ಗಮನ ಹರಿಸದಂತೆ ಮಾಡುವುದಿಲ್ಲ. ಹೃದಯಗಳು ಮತ್ತು ಕಣ್ಣುಗಳು ಹೊರಳಾಡುವ ಒಂದು ದಿನವನ್ನು ಅವರು ಭಯಪಡುತ್ತಾರೆ.
ಸತ್ಯನಿಷೇಧಿಗಳ ಕರ್ಮಗಳು ಮರುಭೂಮಿಯ ಮರೀಚಿಕೆಯಂತೆ. ದಾಹದಿಂದ ಬಳಲುವವನು ಅದನ್ನು ನೀರೆಂದು ಭಾವಿಸುತ್ತಾನೆ. ಎಲ್ಲಿಯವರೆಗೆಂದರೆ, ಅವನು ಅದರ ಬಳಿಗೆ ಬಂದಾಗ ಅಲ್ಲಿ ಅವನಿಗೆ ಏನೂ ಕಾಣಿಸುವುದಿಲ್ಲ. ಆದರೆ ಅವನು ತನ್ನ ಬಳಿ ಅಲ್ಲಾಹನನ್ನು ಕಾಣುತ್ತಾನೆ ಮತ್ತು ಅಲ್ಲಾಹು ಅವನ ಲೆಕ್ಕವನ್ನು ಪೂರ್ಣವಾಗಿ ಪಾವತಿಸುತ್ತಾನೆ. ಅಲ್ಲಾಹು ಅತಿವೇಗವಾಗಿ ವಿಚಾರಣೆ ಮಾಡುವವನಾಗಿದ್ದಾನೆ.
ಅಥವಾ ಅವರ ಕರ್ಮಗಳ ಉದಾಹರಣೆಯು ಆಳ ಸಮುದ್ರದ ತಳದಲ್ಲಿರುವ ಕತ್ತಲೆಯಂತೆ. ಅದನ್ನು ಮೇಲ್ಭಾಗದಲ್ಲಿ ಅಲೆಗಳು ಮುಚ್ಚಿಕೊಂಡಿವೆ. ಅದರ ಮೇಲೆಯೂ ಅಲೆಗಳಿವೆ. ಅದರ ಮೇಲೆ ಕಾರ್ಮೋಡಗಳಿವೆ. ಒಂದರ ಮೇಲೆ ಒಂದರಂತೆ ಅನೇಕ ಕತ್ತಲೆಗಳು. ಅವನು ತನ್ನ ಕೈಯನ್ನು ಹೊರ ಚಾಚಿದರೆ ಹೆಚ್ಚು-ಕಮ್ಮಿ ಅದನ್ನು ನೋಡಲು ಅವನಿಗೆ ಸಾಧ್ಯವಾಗುವುದೇ ಇಲ್ಲ. ಅಲ್ಲಾಹು ಯಾರಿಗೆ ಬೆಳಕನ್ನು ನೀಡಲಿಲ್ಲವೋ ಅವನಿಗೆ ಯಾವುದೇ ಬೆಳಕಿಲ್ಲ.
ಭೂಮ್ಯಾಕಾಶಗಳಲ್ಲಿರುವ ಎಲ್ಲಾ ಜೀವಿಗಳು ಮತ್ತು ರೆಕ್ಕೆಯನ್ನು ಹರಡಿಕೊಂಡು ಹಾರಾಡುವ ಎಲ್ಲಾ ಹಕ್ಕಿಗಳು ಅಲ್ಲಾಹನ ಕೀರ್ತನೆ ಮಾಡುವುದನ್ನು ನೀವು ನೋಡಿಲ್ಲವೇ? ಪ್ರತಿಯೊಬ್ಬರೂ ಅವರ ಪ್ರಾರ್ಥನೆ ಮತ್ತು ಕೀರ್ತನೆಯನ್ನು ತಿಳಿದಿದ್ದಾರೆ. ಅವರು ಮಾಡುತ್ತಿರುವ ಕರ್ಮಗಳ ಬಗ್ಗೆ ಅಲ್ಲಾಹನಿಗೆ ಬಹಳ ಚೆನ್ನಾಗಿ ತಿಳಿದಿದೆ.
ಅಲ್ಲಾಹು ಮೋಡಗಳನ್ನು ಚಲಿಸುವಂತೆ ಮಾಡುವುದನ್ನು ನೀವು ನೋಡಿಲ್ಲವೇ? ನಂತರ ಅವನು ಅವುಗಳನ್ನು ಒಟ್ಟು ಸೇರಿಸುತ್ತಾನೆ. ನಂತರ ಅವುಗಳನ್ನು ಪದರ ಪದರವಾಗಿ ರಾಶಿ ಮಾಡುತ್ತಾನೆ. ಆಗ ಅದರ ನಡುವಿನಿಂದ ಮಳೆ ನೀರು ಹೊರಬರುವುದನ್ನು ನೀವು ನೋಡುತ್ತೀರಿ. ಅವನು ಆಕಾಶದಿಂದ—ಅಲ್ಲಿರುವ ಬೆಟ್ಟಗಳಂತಹ ಮೋಡಗಳ ರಾಶಿಗಳಿಂದ—ಆಲಿಕಲ್ಲುಗಳನ್ನು ಬೀಳಿಸುತ್ತಾನೆ. ನಂತರ ಅವನು ಇಚ್ಛಿಸುವವರಿಗೆ ಅದು ತಗಲುವಂತೆ ಮಾಡುತ್ತಾನೆ ಮತ್ತು ಅವನು ಇಚ್ಛಿಸುವವರಿಂದ ಅದನ್ನು ದೂರ ಸರಿಸುತ್ತಾನೆ. ಅದರ ಮಿಂಚಿನ ಹೊಳಪು ಇನ್ನೇನು ದೃಷ್ಟಿಗಳನ್ನೇ ಕಿತ್ತು ಬಿಡುವಂತಿದೆ.
ಅಲ್ಲಾಹು ಎಲ್ಲಾ ಜೀವರಾಶಿಗಳನ್ನು ನೀರಿನಿಂದ ಸೃಷ್ಟಿಸಿದನು. ಕೆಲವು ಅವುಗಳ ಹೊಟ್ಟೆಯ ಮೇಲೆ ತೆವಳುತ್ತವೆ. ಕೆಲವು ಎರಡು ಕಾಲುಗಳ ಮೇಲೆ ಚಲಿಸುತ್ತವೆ. ಕೆಲವು ನಾಲ್ಕು ಕಾಲುಗಳಲ್ಲಿ ಚಲಿಸುತ್ತವೆ. ಅಲ್ಲಾಹು ಅವನು ಇಚ್ಛಿಸುವುದನ್ನು ಸೃಷ್ಟಿಸುತ್ತಾನೆ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
ಅವರು (ಕಪಟವಿಶ್ವಾಸಿಗಳು) ಹೇಳುತ್ತಾರೆ: “ನಾವು ಅಲ್ಲಾಹನಲ್ಲಿ ಮತ್ತು ಸಂದೇಶವಾಹಕರಲ್ಲಿ ವಿಶ್ವಾಸವಿಟ್ಟಿದ್ದೇವೆ ಮತ್ತು ಅವರನ್ನು ಅನುಸರಿಸುತ್ತೇವೆ.” ನಂತರ ಅದರ ಬಳಿಕವೂ ಅವರಲ್ಲಿ ಒಂದು ಗುಂಪು ವಿಮುಖರಾಗಿ ಹೋಗುತ್ತಾರೆ. ಅವರು ಸತ್ಯವಿಶ್ವಾಸಿಗಳೇ ಅಲ್ಲ.
ಅವರ ಹೃದಯಗಳಲ್ಲಿ ರೋಗವಿದೆಯೇ? ಅಥವಾ ಅವರಿಗೆ ಸಂಶಯವಿದೆಯೇ? ಅಥವಾ ಅಲ್ಲಾಹು ಮತ್ತು ಅವನ ಸಂದೇಶವಾಹಕರು ಅವರಿಗೆ ಅನ್ಯಾಯ ಮಾಡುವರೆಂದು ಅವರಿಗೆ ಭಯವಿದೆಯೇ? ಅಲ್ಲ. ವಾಸ್ತವವಾಗಿ ಅವರೇ ಅಕ್ರಮಿಗಳು.
ಸತ್ಯವಿಶ್ವಾಸಿಗಳನ್ನು—ಅವರ ನಡುವೆ ತೀರ್ಪು ನೀಡಲು—ಅಲ್ಲಾಹು ಮತ್ತು ಸಂದೇಶವಾಹಕರ ಕಡೆಗೆ ಆಮಂತ್ರಿಸಲಾದರೆ, “ನಾವು ಕೇಳಿದ್ದೇವೆ ಮತ್ತು ಅನುಸರಿಸಿದ್ದೇವೆ” ಎಂದು ಅವರು ಹೇಳುತ್ತಾರೆ. ಅವರೇ ಯಶಸ್ವಿಯಾದವರು.
ನೀವೇನಾದರೂ ಆಜ್ಞಾಪಿಸಿದರೆ ಅವರು ಖಂಡಿತ ಹೊರಟು ಬರುತ್ತಾರೆಂದು ಅವರು (ಕಪಟವಿಶ್ವಾಸಿಗಳು) ಅಲ್ಲಾಹನ ಮೇಲೆ ಪ್ರಬಲವಾಗಿ ಆಣೆ ಮಾಡುತ್ತಾ ಹೇಳುತ್ತಾರೆ. ಹೇಳಿರಿ: “ನೀವು ಆಣೆ ಮಾಡಬೇಡಿ. ನಿಮ್ಮ ಆಜ್ಞಾಪಾಲನೆ ಹೇಗಿದೆಯೆಂದು ಎಲ್ಲರಿಗೂ ತಿಳಿದಿದೆ. ನೀವು ಮಾಡುತ್ತಿರುವ ಕರ್ಮಗಳ ಬಗ್ಗೆ ಅಲ್ಲಾಹು ಸೂಕ್ಷ್ಮವಾಗಿ ತಿಳಿದಿದ್ದಾನೆ.”
ಹೇಳಿರಿ: “ನೀವು ಅಲ್ಲಾಹನ ಆಜ್ಞಾಪಾಲನೆ ಮಾಡಿರಿ ಮತ್ತು ಸಂದೇಶವಾಹಕರ ಆಜ್ಞಾಪಾಲನೆ ಮಾಡಿರಿ. ನೀವೇನಾದರೂ ಮುಖ ತಿರುಗಿಸಿ ನಡೆದರೆ, ಅವರ (ಪ್ರವಾದಿಯ) ಹೊಣೆಯು ಅವರಿಗೆ ವಹಿಸಿದ ವಿಷಯಗಳು ಮಾತ್ರ. ನಿಮ್ಮ ಹೊಣೆಯು ನಿಮಗೆ ವಹಿಸಿದ ವಿಷಯಗಳು ಮಾತ್ರ. ನೀವು ಅವರ ಆಜ್ಞಾಪಾಲನೆ ಮಾಡಿದರೆ ಸನ್ಮಾರ್ಗವನ್ನು ಪಡೆಯುತ್ತೀರಿ. ಸಂದೇಶವಾಹಕರ ಹೊಣೆಯು (ಸಂದೇಶವನ್ನು) ಸ್ಪಷ್ಟವಾಗಿ ತಲುಪಿಸಿಕೊಡುವುದು ಮಾತ್ರ.”
ಅಲ್ಲಾಹು ನಿಮ್ಮಲ್ಲಿರುವ ಸತ್ಯವಿಶ್ವಾಸಿಗಳು ಮತ್ತು ಸತ್ಕರ್ಮವೆಸಗಿದವರಿಗೆ, ಅವರಿಗಿಂತ ಮೊದಲಿನವರಿಗೆ ಭೂಮಿಯಲ್ಲಿ ಪ್ರಾತಿನಿಧ್ಯ ನೀಡಿದಂತೆ ಅವರಿಗೂ ಖಂಡಿತ ಪ್ರಾತಿನಿಧ್ಯವನ್ನು ನೀಡುವನು, ಅವನು ಅವರಿಗೆ ಸಂತೃಪ್ತಿಯಿಂದ ನೀಡಿದ ಅವರ ಧರ್ಮವನ್ನು (ಭೂಮಿಯಲ್ಲಿ) ಪ್ರಬಲವಾಗಿ ಸ್ಥಾಪಿಸುವನು ಮತ್ತು ಅವರು ಅನುಭವಿಸುತ್ತಿರುವ ಭಯವನ್ನು ನಿರ್ಭಯವಾಗಿ ಬದಲಾಯಿಸುವನೆಂದು ವಾಗ್ದಾನ ಮಾಡಿದ್ದಾನೆ. ಅವರು ನನ್ನನ್ನು ಮಾತ್ರ ಆರಾಧಿಸುತ್ತಾರೆ ಮತ್ತು ನನ್ನೊಂದಿಗೆ ಯಾರನ್ನೂ ಸಹಭಾಗಿಯಾಗಿ ಮಾಡುವುದಿಲ್ಲ. ಯಾರು ಅದರ ಬಳಿಕವೂ ಸತ್ಯವನ್ನು ನಿಷೇಧಿಸುತ್ತಾರೋ ಅವರೇ ನಿಜವಾದ ದುಷ್ಕರ್ಮಿಗಳು.
ಓ ಸತ್ಯವಿಶ್ವಾಸಿಗಳೇ! ನಿಮ್ಮ ಅಧೀನದಲ್ಲಿರುವ ಗುಲಾಮರು ಮತ್ತು ನಿಮ್ಮಲ್ಲಿ ಪ್ರೌಢಾವಸ್ಥೆಗೆ ತಲುಪದವರು ಮೂರು ವೇಳೆಗಳಲ್ಲಿ ನಿಮ್ಮೊಂದಿಗೆ ಪ್ರವೇಶಾನುಮತಿಯನ್ನು ಕೇಳಲಿ. ಫಜ್ರ್ ನಮಾಝ್‍ಗೆ ಮೊದಲು, ಮಧ್ಯಾಹ್ನದ ವೇಳೆ (ವಿಶ್ರಾಂತಿಗಾಗಿ) ನೀವು ನಿಮ್ಮ ಉಡುಪುಗಳನ್ನು ಕಳಚಿಡುವಾಗ ಮತ್ತು ಇಶಾ ನಮಾಝ್‍ನ ಬಳಿಕ. ಇವು ನಿಮ್ಮ ಮೂರು ಖಾಸಗಿ ಸಮಯಗಳಾಗಿವೆ. ಇವುಗಳ ಹೊರತಾದ ಸಮಯಗಳಲ್ಲಿ ನಿಮಗೆ ಅಥವಾ ಅವರಿಗೆ ದೋಷವಿಲ್ಲ. ನೀವು ಪರಸ್ಪರ ಒಬ್ಬರ ಬಳಿಗೆ ಇನ್ನೊಬ್ಬರು ಬರುತ್ತಲೂ ಹೋಗುತ್ತಲೂ ಇರುವವರಾಗಿದ್ದೀರಿ. ಈ ರೀತಿ ಅಲ್ಲಾಹು ನಿಮಗೆ ವಚನಗಳನ್ನು ವಿವರಿಸಿಕೊಡುತ್ತಾನೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
ನಿಮ್ಮ ಮಕ್ಕಳು ಪ್ರೌಢಾವಸ್ಥೆಯನ್ನು ತಲುಪಿದರೆ ಅವರಿಗಿಂತ ಮೊದಲಿನವರು ಪ್ರವೇಶಾನುಮತಿ ಕೇಳುವಂತೆ ಅವರೂ ಪ್ರವೇಶಾನುಮತಿ ಕೇಳಲಿ. ಈ ರೀತಿ ಅಲ್ಲಾಹು ನಿಮಗೆ ಅವನ ವಚನಗಳನ್ನು ವಿವರಿಸಿಕೊಡುತ್ತಾನೆ. ಅಲ್ಲಾಹು ಸರ್ವಜ್ಞನು ಮತ್ತು ವಿವೇಕಪೂರ್ಣನಾಗಿದ್ದಾನೆ.
ವಿವಾಹವಾಗುವ ಬಯಕೆಯಿಲ್ಲದ ವಯಸ್ಸಾದ (ಋತುಸ್ರಾವ ನಿಂತ) ಮಹಿಳೆಯರು ತಮ್ಮ ಹೊರ ಉಡುಪುಗಳನ್ನು ಕಳಚಿಡುವುದರಲ್ಲಿ ದೋಷವಿಲ್ಲ—ಆದರೆ ಅವರು ಸೌಂದರ್ಯವನ್ನು ಪ್ರದರ್ಶಿಸುವ ಉದ್ದೇಶವನ್ನು ಹೊಂದಿರಬಾರದು. ಆದರೆ ಅವರು ಈ ವಿಷಯದಲ್ಲಿ ಸೂಕ್ಷ್ಮತೆ ಪಾಲಿಸುವುದು ಅವರಿಗೆ ಅತ್ಯುತ್ತಮವಾಗಿದೆ. ಅಲ್ಲಾಹು ಎಲ್ಲವನ್ನು ಕೇಳುವವನು ಮತ್ತು ತಿಳಿದವನಾಗಿದ್ದಾನೆ.
ಕುರುಡ, ಕುಂಟ, ರೋಗಿ ಮುಂತಾದವರಿಗೆ (ವಿನಾಯಿತಿಯಿರುವವರಿಗೆ) ಮತ್ತು ಸ್ವತಃ ನಿಮಗೂ—ನೀವು ನಿಮ್ಮ ಮನೆಗಳಲ್ಲಿ, ನಿಮ್ಮ ತಂದೆಯಂದಿರ ಮನೆಗಳಲ್ಲಿ, ನಿಮ್ಮ ತಾಯಂದಿರ ಮನೆಗಳಲ್ಲಿ, ನಿಮ್ಮ ಸಹೋದರರ ಮನೆಗಳಲ್ಲಿ, ನಿಮ್ಮ ಸಹೋದರಿಯರ ಮನೆಗಳಲ್ಲಿ, ನಿಮ್ಮ ತಂದೆಯ ಸಹೋದರರ ಮನೆಗಳಲ್ಲಿ, ನಿಮ್ಮ ತಂದೆಯ ಸಹೋದರಿಯರ ಮನೆಗಳಲ್ಲಿ, ನಿಮ್ಮ ತಾಯಿಯ ಸಹೋದರರ ಮನೆಗಳಲ್ಲಿ, ನಿಮ್ಮ ತಾಯಿಯ ಸಹೋದರಿಯರ ಮನೆಗಳಲ್ಲಿ, ಕೀಲಿಕೈಗಳು ನಿಮ್ಮ ವಶದಲ್ಲಿರುವ ಮನೆಗಳಲ್ಲಿ ಅಥವಾ ನಿಮ್ಮ ಸ್ನೇಹಿತರ ಮನೆಗಳಲ್ಲಿ ಆಹಾರ ಸೇವಿಸುವುದರಲ್ಲಿ ದೋಷವಿಲ್ಲ.[1] ನೀವು ಎಲ್ಲರೂ ಒಟ್ಟಾಗಿ ಆಹಾರ ಸೇವಿಸುವುದರಲ್ಲೂ ಅಥವಾ ಬೇರೆ ಬೇರೆಯಾಗಿ ಸೇವಿಸುವುದರಲ್ಲೂ ನಿಮಗೆ ದೋಷವಿಲ್ಲ. ಆದರೆ ನೀವು ಮನೆಯನ್ನು ಪ್ರವೇಶಿಸುವಾಗ ಮನೆಯವರಿಗೆ ಸಲಾಂ ಹೇಳಿರಿ. ಅಲ್ಲಾಹನ ಕಡೆಯ ಸಮೃದ್ಧವಾದ ಮತ್ತು ಪರಿಶುದ್ಧವಾದ ಪ್ರಾರ್ಥನೆಯೆಂಬ ನೆಲೆಯಲ್ಲಿ. ಈ ರೀತಿ ಅಲ್ಲಾಹು ನಿಮಗೆ ವಚನಗಳನ್ನು ವಿವರಿಸಿಕೊಡುತ್ತಾನೆ. ನೀವು ಆಲೋಚಿಸುವುದಕ್ಕಾಗಿ.
[1] ಜನರು ಅಂಗವಿಕಲರೊಂದಿಗೆ ಮತ್ತು ರೋಗಿಗಳೊಂದಿಗೆ ಕುಳಿತು ಆಹಾರ ಸೇವಿಸುವುದನ್ನು ಅಸಹ್ಯಪಡುತ್ತಿದ್ದರು. ಹಾಗೆಯೇ ಅಂಗವಿಕಲರು ಮತ್ತು ರೋಗಿಗಳು ಕೂಡ ಮುಜುಗರವನ್ನು ತಪ್ಪಿಸಲು ಆರೋಗ್ಯವಂತರೊಡನೆ ಕುಳಿತು ಆಹಾರ ಸೇವಿಸುತ್ತಿರಲಿಲ್ಲ. ಇಂತಹವರೊಡನೆ ಆಹಾರ ಸೇವಿಸುವುದರಲ್ಲಿ ಯಾವುದೇ ದೋಷವಿಲ್ಲವೆಂದು ಅಲ್ಲಾಹು ಇಲ್ಲಿ ಹೇಳುತ್ತಿದ್ದಾನೆ. ಕೀಲಿಕೈಗಳು ವಶದಲ್ಲಿರುವವರು ಎಂದರೆ, ಸಹಾಬಿಗಳು ಯುದ್ಧಕ್ಕೆ ಹೋಗುವಾಗ ಮನೆಯ ಕೀಲಿಕೈಗಳನ್ನು ಯುದ್ಧದಿಂದ ವಿನಾಯಿತಿಯರುವವರ ಕೈಗೆ ನೀಡುತ್ತಿದ್ದರು. ಅವರು ಆ ಮನೆಗಳಲ್ಲಿ ಆಹಾರ ಸೇವಿಸಲು ಹಿಂಜರಿಯುತ್ತಿದ್ದರು. ಆ ಮನೆಗಳಲ್ಲಿ ಆಹಾರ ಸೇವಿಸುವುದರಲ್ಲಿ ತಪ್ಪಿಲ್ಲ ಎಂದು ಇಲ್ಲಿ ಹೇಳಲಾಗಿದೆ.
ಸತ್ಯವಿಶ್ವಾಸಿಗಳೆಂದರೆ ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಟ್ಟವರು ಮಾತ್ರ. ಅವರು (ಮುಸಲ್ಮಾನರ ಹಿತಕ್ಕಾಗಿ) ಸಂದೇಶವಾಹಕರು ಸೇರಿಸಿದ ಸಭೆಯಲ್ಲಿ ಅವರ ಜೊತೆಗಿರುವಾಗ, ಅವರ ಅನುಮತಿಯಿಲ್ಲದೆ ಸಭೆಯಿಂದ ಹೊರಹೋಗುವುದಿಲ್ಲ. (ಪ್ರವಾದಿಯವರೇ) ಯಾರು ನಿಮ್ಮೊಡನೆ ಅನುಮತಿ ಬೇಡುತ್ತಾರೋ ಅವರು ಅಲ್ಲಾಹನಲ್ಲಿ ಮತ್ತು ಅವನ ಸಂದೇಶವಾಹಕರಲ್ಲಿ ವಿಶ್ವಾಸವಿಟ್ಟವರೇ ಆಗಿದ್ದಾರೆ. ಅವರು ಅವರ ಯಾವುದಾದರೂ ಕೆಲಸಗಳಿಗೆ ಹೋಗಲು ನಿಮ್ಮೊಂದಿಗೆ ಅನುಮತಿ ಕೇಳಿದರೆ, ಅವರಲ್ಲಿ ನೀವು ಇಚ್ಛಿಸುವವರಿಗೆ ಅನುಮತಿ ನೀಡಿರಿ ಮತ್ತು ಅವರಿಗೋಸ್ಕರ ಅಲ್ಲಾಹನಲ್ಲಿ ಕ್ಷಮೆಯಾಚಿಸಿರಿ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
ನೀವು ಪರಸ್ಪರ ಒಬ್ಬರನ್ನೊಬ್ಬರು ಕರೆಯುವಂತೆ ಅಲ್ಲಾಹನ ಸಂದೇಶವಾಹಕರನ್ನು ಕರೆಯಬೇಡಿ.[1] ನಿಮ್ಮಲ್ಲಿ ಯಾರಿಗೂ ತಿಳಿಯದಂತೆ ಗುಟ್ಟಾಗಿ (ಪ್ರವಾದಿಯವರ ಸಭೆಯಿಂದ) ತಪ್ಪಿಸಿಕೊಳ್ಳುವವರ (ಕಪಟವಿಶ್ವಾಸಿಗಳ) ಬಗ್ಗೆ ಅಲ್ಲಾಹನಿಗೆ ಬಹಳ ಚೆನ್ನಾಗಿ ತಿಳಿದಿದೆ. ಪ್ರವಾದಿಯವರ ಆಜ್ಞೆಗೆ ವಿರುದ್ಧವಾಗಿ ಸಾಗುವವರು—ಅವರಿಗೇನಾದರೂ ಅನಾಹುತ ಸಂಭವಿಸುವುದರ ಬಗ್ಗೆ ಅಥವಾ ಯಾತನಾಮಯ ಶಿಕ್ಷೆ ಎರಗುವುದರ ಬಗ್ಗೆ ಸದಾ ಭಯಪಡುತ್ತಿರಲಿ.
[1] ಅಂದರೆ ನೀವು ಪ್ರವಾದಿಯವರನ್ನು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಓ ಮುಹಮ್ಮದ್ ಎಂದು ಕರೆಯಬೇಡಿ. ಬದಲಿಗೆ, ಓ ಪ್ರವಾದಿಯವರೇ, ಓ ಅಲ್ಲಾಹನ ಸಂದೇಶವಾಹಕರೇ ಎಂದು ಕರೆಯಿರಿ.
ತಿಳಿಯಿರಿ! ನಿಶ್ಚಯವಾಗಿಯೂ ಭೂಮ್ಯಾಕಾಶಗಳಲ್ಲಿರುವ ವಸ್ತುಗಳೆಲ್ಲವೂ ಅಲ್ಲಾಹನಿಗೆ ಸೇರಿದ್ದು. ನೀವು ಯಾವ ಮಾರ್ಗದಲ್ಲಿದ್ದೀರಿ ಎಂದು ಅವನಿಗೆ ಬಹಳ ಚೆನ್ನಾಗಿ ತಿಳಿದಿದೆ. ಅವರನ್ನು ಅವನ ಬಳಿಗೆ ಮರಳಿಸಲಾಗುವ ದಿನ ಅವನು ಅವರಿಗೆ ಅವರ ಎಲ್ಲಾ ಕರ್ಮಗಳ ಬಗ್ಗೆ ತಿಳಿಸಿಕೊಡುವನು. ಅಲ್ಲಾಹು ಎಲ್ಲಾ ವಿಷಯಗಳ ಬಗ್ಗೆ ತಿಳಿದವನಾಗಿದ್ದಾನೆ.
Contents of the translations can be downloaded and re-published, with the following terms and conditions:
1. No modification, addition, or deletion of the content.
2. Clearly referring to the publisher and the source (QuranEnc.com).
3. Mentioning the version number when re-publishing the translation.
4. Keeping the transcript information inside the document.
5. Notifying the source (QuranEnc.com) of any note on the translation.
6. Updating the translation according to the latest version issued from the source (QuranEnc.com).
7. Inappropriate advertisements must not be included when displaying translations of the meanings of the Noble Quran.
Rezultatet e kërkimit:
API specs
Endpoints:
Sura translation
GET / https://quranenc.com/api/v1/translation/sura/{translation_key}/{sura_number} description: get the specified translation (by its translation_key) for the speicified sura (by its number)
Parameters: translation_key: (the key of the currently selected translation) sura_number: [1-114] (Sura number in the mosshaf which should be between 1 and 114)
Returns:
json object containing array of objects, each object contains the "sura", "aya", "translation" and "footnotes".
GET / https://quranenc.com/api/v1/translation/aya/{translation_key}/{sura_number}/{aya_number} description: get the specified translation (by its translation_key) for the speicified aya (by its number sura_number and aya_number)
Parameters: translation_key: (the key of the currently selected translation) sura_number: [1-114] (Sura number in the mosshaf which should be between 1 and 114) aya_number: [1-...] (Aya number in the sura)
Returns:
json object containing the "sura", "aya", "translation" and "footnotes".