ಓ ಸತ್ಯವಿಶ್ವಾಸಿಗಳೇ, ನೀವು ಅಲ್ಲಾಹನನ್ನು ಮತ್ತು ಅವನ ಸಂದೇಶವಾಹಕರನ್ನು ಮೀರಿ ನಡೆಯಬೇಡಿರಿ ಮತ್ತು ಅಲ್ಲಾಹನನ್ನು ಭಯಪಡುತ್ತಿರಿ. ನಿಶ್ಚಯವಾಗಿಯು ಅಲ್ಲಾಹನು ಸರ್ವವನ್ನಾಲಿಸುವವನೂ, ಸರ್ವಜ್ಞನೂ ಆಗಿದ್ದಾನೆ.
ಓ ಸತ್ಯವಿಶ್ವಾಸಿಗಳೇ, ನಿಮ್ಮ ಧ್ವನಿಗಳನ್ನು ಪೈಗಂಬರ್‌ರವರ ಧ್ವನಿಗಿಂತ ಮೇಲೇರಿಸ ಬೇಡಿರಿ, ಪರಸ್ಪರರೊಂದಿಗೆ ನೀವು ಉಚ್ಛಸ್ವರದಲ್ಲಿ ಮಾತಾಡುವಂತೆ ಅವರೊಂದಿಗೂ ಉಚ್ಛಸ್ವರದಲ್ಲಿ ಮಾತನಾಡಬೇಡಿರಿ, ನಿಮಗೆ ಅರಿವಿಲ್ಲದೆಯೇ ನಿಮ್ಮ ಕರ್ಮಗಳು ನಿಷ್ಫಲವಾಗಬಹುದು.
ನಿಸ್ಸಂಶಯವಾಗಿಯು ಅಲ್ಲಾಹನ ಸಂದೇಶವಾಹಕರ ಸನ್ನಿಧಿಯಲ್ಲಿ ತಮ್ಮ ಧ್ವನಿಗಳನ್ನು ತಗ್ಗಿಸುವವರ ಹೃದಯಗಳನ್ನು ಅಲ್ಲಾಹನು ಭಯಭಕ್ತಿಗಾಗಿ ಪರೀಕ್ಷಿಸಿದ್ದಾನೆ. ಅವರಿಗೆ ಕ್ಷಮೆಯೂ, ಮಹಾ ಪ್ರತಿಫಲವೂ ಇದೆ.