ಅಲ್ಲಾಹು ಯಾವುದೇ ವ್ಯಕ್ತಿಗೂ ಅವನ ದೇಹದೊಳಗೆ ಎರಡು ಹೃದಯಗಳನ್ನು ಉಂಟುಮಾಡಿಲ್ಲ.[1] ನೀವು ಝಿಹಾರ್ ಮಾಡುವ ನಿಮ್ಮ ಪತ್ನಿಯರನ್ನು ಅವನು ನಿಮಗೆ ತಾಯಿಯಾಗಿ ಮಾಡಿಲ್ಲ.[2] ನಿಮ್ಮ ದತ್ತುಪುತ್ರರನ್ನು ಅವನು ನಿಮಗೆ ಪುತ್ರರಾಗಿ ಮಾಡಿಲ್ಲ.[3] ಇವೆಲ್ಲವೂ ನೀವು ನಿಮ್ಮ ಬಾಯಿಯಿಂದ ಹೇಳುವ ಮಾತುಗಳಾಗಿವೆ. ಅಲ್ಲಾಹು ಸತ್ಯವನ್ನೇ ಹೇಳುತ್ತಾನೆ. ಅವನು ಸನ್ಮಾರ್ಗವನ್ನು ತೋರಿಸಿಕೊಡುತ್ತಾನೆ.
[1] ಕಪಟವಿಶ್ವಾಸಿಗಳಲ್ಲಿ ಕೆಲವರು ಹೇಳುತ್ತಿದ್ದರು: “ನಮಗೆ ಎರಡು ಹೃದಯಗಳಿವೆ. ಒಂದು ಹೃದಯದಲ್ಲಿ ಮುಸಲ್ಮಾನರ ಬಗ್ಗೆ ಪ್ರೀತಿಯಿದೆ ಮತ್ತು ಇನ್ನೊಂದು ಹೃದಯದಲ್ಲಿ ಸತ್ಯನಿಷೇಧಿಗಳ ಬಗ್ಗೆ ಪ್ರೀತಿಯಿದೆ.” ಆದರೆ ಅಲ್ಲಾಹು ಇದನ್ನು ನಿರಾಕರಿಸಿ, ಮನುಷ್ಯನಿಗೆ ಇರುವುದು ಒಂದೇ ಹೃದಯ. ಆ ಹೃದಯದಲ್ಲಿ ಅಲ್ಲಾಹನಲ್ಲಿರುವ ಪ್ರೀತಿ ಮತ್ತು ಅಲ್ಲಾಹನ ವೈರಿಗಳಲ್ಲಿರುವ ಪ್ರೀತಿ ಒಟ್ಟಿಗೆ ಇರಲು ಸಾಧ್ಯವಿಲ್ಲ ಎಂದು ಹೇಳುತ್ತಿದ್ದಾನೆ. [2] ಝಿಹಾರ್ ಎಂದರೆ ಹೆಂಡತಿಯನ್ನು “ನೀನು ನನಗೆ ನನ್ನ ತಾಯಿ ಸಮಾನ” ಎಂದು ಹೇಳಿ ಆಕೆಯೊಂದಿಗೆ ಲೈಂಗಿಕ ಸಂಬಂಧವನ್ನು ಕಡಿದುಕೊಳ್ಳುವುದು. ಆದರೆ ಇದು ವಿಚ್ಛೇದನವಲ್ಲ. ಆದ್ದರಿಂದ ಹೆಂಡತಿಗೆ ಅತ್ತ ಗಂಡನೊಂದಿಗೆ ಬದುಕಲೂ ಆಗದೆ ಇತ್ತ ಬೇರೊಬ್ಬನನ್ನು ವಿವಾಹವಾಗಲೂ ಆಗದೆ ಅಡಕತ್ತರಿಯಲ್ಲಿ ಸಿಲುಕಿದ ಪರಿಸ್ಥಿತಿಯನ್ನು ಅನುಭವಿಸಬೇಕಾಗಿ ಬರುತ್ತಿತ್ತು. ಇಸ್ಲಾಮಿ ಪೂರ್ವ ಕಾಲದಲ್ಲಿ ವ್ಯಾಪಕವಾಗಿದ್ದ ಇಂತಹ ಅನೇಕ ಮಹಿಳಾ ವಿರೋಧಿ ಸಂಪ್ರದಾಯಗಳನ್ನು ಇಸ್ಲಾಂ ಕೊನೆಗೊಳಿಸಿತು. [3] ಮಕ್ಕಳನ್ನು ದತ್ತು ಪಡೆಯುವುದನ್ನು ಇಸ್ಲಾಂ ವಿರೋಧಿಸುವುದಿಲ್ಲ. ಆದರೆ ದತ್ತು ಪಡೆದ ಮಕ್ಕಳು ದತ್ತು ಪುತ್ರರಾಗಿರುತ್ತಾರೆಯೇ ವಿನಾ ದತ್ತು ಪಡೆದವನ ಸ್ವಂತ ಮಕ್ಕಳ ಸ್ಥಾನಮಾನಕ್ಕೇರುವುದಿಲ್ಲ. ದತ್ತು ಪಡೆದ ವ್ಯಕ್ತಿ ಕೇವಲ ಸಂರಕ್ಷಕನಾಗುತ್ತಾನೆಯೇ ಹೊರತು ನೈಜ ತಂದೆಯಾಗುವುದಿಲ್ಲ.
ನೀವು ಅವರನ್ನು (ದತ್ತುಪುತ್ರರನ್ನು) ಅವರ ತಂದೆಯ ಹೆಸರಿಗೆ ಸೇರಿಸಿ ಕರೆಯಿರಿ. ಅದು ಅಲ್ಲಾಹನ ಬಳಿ ಅತ್ಯಂತ ನ್ಯಾಯಯುತವಾಗಿದೆ. ನಿಮಗೆ ಅವರ ತಂದೆ ಯಾರೆಂದು ಗೊತ್ತಿಲ್ಲದಿದ್ದರೆ ಅವರು ನಿಮ್ಮ ಧಾರ್ಮಿಕ ಸಹೋದರರು ಮತ್ತು ಮಿತ್ರರಾಗಿದ್ದಾರೆ. ನೀವು ಪ್ರಮಾದದಿಂದ ಏನಾದರೂ ತಪ್ಪುಗಳನ್ನು ಮಾಡಿದರೆ ಅದರಿಂದ ನಿಮಗೆ ದೋಷವಿಲ್ಲ. ಆದರೆ ನೀವು ಉದ್ದೇಶಪೂರ್ವಕ ಮಾಡುವ ತಪ್ಪುಗಳಿಗೆ ಶಿಕ್ಷೆಯಿದೆ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
ಸತ್ಯವಿಶ್ವಾಸಿಗಳಿಗೆ ಸ್ವಯಂ ಅವರಿಗಿಂತಲೂ ಹೆಚ್ಚು ಪ್ರವಾದಿಯವರು ಆಪ್ತರಾಗಿದ್ದಾರೆ.[1] ಅವರ ಪತ್ನಿಯರು ಸತ್ಯವಿಶ್ವಾಸಿಗಳ ಮಾತೆಯರಾಗಿದ್ದಾರೆ.[2] ಅಲ್ಲಾಹನ ಗ್ರಂಥದಲ್ಲಿ ಇತರ ಸತ್ಯವಿಶ್ವಾಸಿಗಳು ಮತ್ತು ಮುಹಾಜಿರರಿಗಿಂತಲೂ ಹೆಚ್ಚು ರಕ್ತ ಸಂಬಂಧಿಗಳು ಪರಸ್ಪರ ಆಪ್ತರಾಗಿದ್ದಾರೆ.[3] ಆದರೆ ನೀವು ನಿಮ್ಮ ಮಿತ್ರರೊಡನೆ ಉತ್ತಮವಾಗಿ ವರ್ತಿಸುವುದು ಇದರಿಂದ ಹೊರತಾಗಿದೆ. ಅದು ಗ್ರಂಥದಲ್ಲಿ ದಾಖಲಿಸಲಾದ ನಿಯಮವಾಗಿದೆ.
[1] ಪ್ರವಾದಿ ಮುಹಮ್ಮದ್ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ರವರು ಸತ್ಯವಿಶ್ವಾಸಿಗಳ ಹಿತಚಿಂತಕರಾಗಿದ್ದಾರೆ. ಸತ್ಯವಿಶ್ವಾಸಿಗಳು ಅಭ್ಯುದಯ ಹೊಂದಬೇಕು ಮತ್ತು ಸ್ವರ್ಗ ಪ್ರವೇಶ ಮಾಡಬೇಕು ಎಂಬುದೇ ಅವರ ಪರಮೋಚ್ಛ ಗುರಿಯಾಗಿದೆ. ಅದಕ್ಕಾಗಿ ಅವರು ಆಹೋರಾತ್ರಿ ನಿರಂತರ ಪರಿಶ್ರಮಿಸುತ್ತಾರೆ. ಆದ್ದರಿಂದ ಸತ್ಯವಿಶ್ವಾಸಿಗಳು ಕೂಡ ಅವರನ್ನು ಅತಿಯಾಗಿ ಪ್ರೀತಿಸಬೇಕು. ಅವರಿಗಾಗಿ ಯಾವುದೇ ತ್ಯಾಗವನ್ನು ಮಾಡಲು ಸಿದ್ಧರಾಗಬೇಕು. ಇತರೆಲ್ಲರಿಗಿಂತ ಹೆಚ್ಚು ಅವರನ್ನು ಪ್ರೀತಿಸಬೇಕು. ಅವರ ಆಜ್ಞೆಗಳನ್ನು ಪಾಲಿಸುವುದರಲ್ಲಿ ಸ್ವಲ್ಪವೂ ಹಿಂಜರಿಯಬಾರದು. [2] ಅಂದರೆ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ನಂತರ ಅವರ ಪತ್ನಿಯರನ್ನು ವಿವಾಹವಾಗುವ ಅನುಮತಿ ಯಾರಿಗೂ ಇಲ್ಲ. ಏಕೆಂದರೆ, ಅವರು ಗೌರವಾನ್ವಿತ ಸ್ಥಾನದಲ್ಲಿರುವವರು. ಅವರು ಸತ್ಯವಿಶ್ವಾಸಿ ಪುರುಷರಿಗೂ, ಮಹಿಳೆಯರಿಗೂ ತಾಯಂದಿರಾಗಿದ್ದಾರೆ. [3] ಮುಹಾಜಿರರು (ಮಕ್ಕಾದಿಂದ ಹಿಜ್ರ ಮಾಡಿದ ಮುಸ್ಲಿಮರು) ಮದೀನಕ್ಕೆ ವಲಸೆ ಬಂದ ಆರಂಭಕಾಲದಲ್ಲಿ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಒಬ್ಬ ಮುಹಾಜಿರ್ ಮತ್ತು ಒಬ್ಬ ಅನ್ಸಾರ್ (ಮದೀನ ನಿವಾಸಿ ಮುಸ್ಲಿಂ) ನಡುವೆ ವಿಶೇಷ ಸಾಹೋದರತೆಯನ್ನು ಸ್ಥಾಪಿಸಿದ್ದರು. ಅನ್ಸಾರರು ತಮ್ಮ ಆಸ್ತಿಯಲ್ಲಿ ಮುಹಾಜಿರರಿಗೆ ಹಕ್ಕನ್ನು ನೀಡುತ್ತಿದ್ದರು. ಆದರೆ ವಾರಸು ನಿಯಮಗಳನ್ನು ವಿವರಿಸುವ ವಚನಗಳು ಅವತೀರ್ಣವಾದ ನಂತರ ವಾರೀಸು ಹಕ್ಕನ್ನು ಕೇವಲ ಸಂಬಂಧಿಕರಿಗೆ ಮಾತ್ರ ಸೀಮಿತಗೊಳಿಸಲಾಯಿತು.
ಓ ಸತ್ಯವಿಶ್ವಾಸಿಗಳೇ! ಅಲ್ಲಾಹು ನಿಮಗೆ ತೋರಿದ ಅನುಗ್ರಹವನ್ನು ಸ್ಮರಿಸಿರಿ. ಆ ಸೈನ್ಯಗಳು ನಿಮ್ಮ ಬಳಿಗೆ ಬಂದಾಗ, ನಾವು ಅವರ ವಿರುದ್ಧ ಬಿರುಗಾಳಿಯನ್ನು ಮತ್ತು ನಿಮಗೆ ಕಾಣದಂತಹ ಸೈನ್ಯಗಳನ್ನು ಕಳುಹಿಸಿದ ಸಂದರ್ಭ.[1] ಅಲ್ಲಾಹು ನೀವು ಮಾಡುತ್ತಿರುವ ಕರ್ಮಗಳನ್ನು ನೋಡುತ್ತಿದ್ದಾನೆ.
[1] ಹಿಜ್ರ 5ನೇ ವರ್ಷದಲ್ಲಿ ಮಕ್ಕಾದ ಕುರೈಶರು ಮತ್ತು ಅವರ ಮೈತ್ರಿ ಮಾಡಿಕೊಂಡ ಗೋತ್ರಗಳು ಸೇರಿ ಸುಮಾರು 10,000 ಸಂಖ್ಯೆಯ ಬೃಹತ್ ಸೈನ್ಯದೊಂದಿಗೆ ಅವರು ಮದೀನದ ಮೇಲೆ ದಂಡೆತ್ತಿ ಬಂದರು. ಈ ಯುದ್ಧವನ್ನು ಅಹ್ಝಾಬ್ ಯುದ್ಧ ಅಥವಾ ಖಂದಕ್ ಯುದ್ಧ ಎಂದು ಕರೆಯಲಾಗುತ್ತದೆ. ವೈರಿಗಳು ಮದೀನ ಪ್ರವೇಶಿಸದಂತೆ ಮುಸಲ್ಮಾನರು ಮದೀನದ ಸುತ್ತಲು ಹೊಂಡ ತೋಡಿದರು. ವೈರಿಗಳು ಮದೀನ ಪ್ರವೇಶಿಸಲಾಗದೆ ಅದರ ಹೊರವಲಯದಲ್ಲಿ ಬೀಡು ಬಿಟ್ಟು ಸುಮಾರು ಒಂದು ತಿಂಗಳ ಕಾಲ ಮದೀನಕ್ಕೆ ದಿಗ್ಬಂಧನ ಹಾಕಿದರು. ಕೊನೆಗೆ ಒಂದು ರಾತ್ರಿ ತೀವ್ರ ಸ್ವರೂಪದ ಬಿರುಗಾಳಿ ಬೀಸಿ ಅವರ ಡೇರೆಗಳೆಲ್ಲವೂ ಹಾರಿಹೋದವು. ಗಾಳಿಮಳೆಯಿಂದ ಅವರು ಅಲ್ಲಿ ಉಳಿಯಲು ಸಾಧ್ಯವಾಗದೆ ಎಲ್ಲರೂ ಅಲ್ಲಿಂದ ಪಲಾಯನ ಮಾಡಿದರು.
ಅವರು ನಿಮ್ಮ ಮೇಲ್ಭಾಗದಿಂದ ಮತ್ತು ನಿಮ್ಮ ತಳಭಾಗದಿಂದ ನಿಮ್ಮ ಬಳಿಗೆ ಬಂದ ಸಂದರ್ಭ. ಕಣ್ಣುಗಳು ಸ್ತಬ್ಧವಾದ ಮತ್ತು ಹೃದಯಗಳು ಗಂಟಲಿಗೆ ತಲುಪಿದ ಸಂದರ್ಭ. ಆಗ ನೀವು ಅಲ್ಲಾಹನ ಬಗ್ಗೆ ತಪ್ಪುಕಲ್ಪನೆಗಳನ್ನು ಕಲ್ಪಿಸುತ್ತಿದ್ದಿರಿ.
ಅವರಲ್ಲಿ (ಕಪಟವಿಶ್ವಾಸಿಗಳಲ್ಲಿ) ಒಂದು ಗುಂಪು ಜನರು ಹೇಳಿದ ಸಂದರ್ಭ: “ಯಸ್ರಿಬಿನ[1] ಜನರೇ! ನಿಮಗೆ ಇಲ್ಲಿ ಯಾವುದೇ ಸ್ಥಾನವಿಲ್ಲ. ಇಲ್ಲಿಂದ ಮರಳಿ ಹೋಗಿ.” ಅವರಲ್ಲಿ ಇನ್ನೊಂದು ಗುಂಪು ಪ್ರವಾದಿಯ ಬಳಿಗೆ ಬಂದು (ಯುದ್ಧರಂಗದಿಂದ ಪಲಾಯನ ಮಾಡಲು) ಅನುಮತಿ ಕೇಳುತ್ತಾ ಹೇಳಿದರು: “ನಮ್ಮ ಮನೆಗಳು ಭದ್ರವಾಗಿಲ್ಲ.” ವಾಸ್ತವದಲ್ಲಿ ಅವರ ಮನೆಗಳು ಭದ್ರವಾಗಿದ್ದವು. ಅವರು ಪಲಾಯನ ಮಾಡಲು ಮಾತ್ರ ಬಯಸುತ್ತಿದ್ದರು.
ಮದೀನದ ಎಲ್ಲಾ ದಿಕ್ಕುಗಳಿಂದಲೂ ವೈರಿಗಳು ಅವರ (ಕಪಟವಿಶ್ವಾಸಿಗಳ) ಬಳಿಗೆ ಬಂದು, ನಂತರ ಅವರೊಡನೆ ಧರ್ಮಪರಿತ್ಯಾಗ ಮಾಡಬೇಕೆಂದು ಬೇಡಿಕೆಯಿಟ್ಟರೆ, ಅವರು ಅದನ್ನು ಈಡೇರಿಸುವರು. ಸ್ವಲ್ಪವೇ ಹೊರತು ಅವರು ಅದರಿಂದ ಹಿಂಜರಿಯುವುದಿಲ್ಲ.
ಹೇಳಿರಿ: “ನೀವು ಸಾವಿನಿಂದ ಅಥವಾ ಕೊಲೆಯಾಗುವುದರಿಂದ ತಪ್ಪಿಸಿಕೊಳ್ಳಲು ಪಲಾಯನ ಮಾಡುವುದಾದರೆ ಆ ಪಲಾಯನವು ನಿಮಗೆ ಯಾವುದೇ ಪ್ರಯೋಜನ ನೀಡುವುದಿಲ್ಲ. ನೀವು ಹಾಗೆ ಮಾಡಿದರೂ ನಿಮಗೆ ತಾತ್ಕಾಲಿಕ ಆನಂದ ಮಾತ್ರ ನೀಡಲಾಗುತ್ತದೆ.”
ಹೇಳಿರಿ: “ಅಲ್ಲಾಹು ನಿಮಗೇನಾದರೂ ತೊಂದರೆ ಮಾಡಲು ಬಯಸಿದರೆ, ಅಥವಾ ನಿಮಗೆ ದಯೆ ತೋರಲು ಬಯಸಿದರೆ, ಅಲ್ಲಾಹನಿಂದ ನಿಮ್ಮನ್ನು ರಕ್ಷಿಸುವವನು ಯಾರು? ಅವರು ಅಲ್ಲಾಹನ ಹೊರತು ಬೇರೆ ರಕ್ಷಕನನ್ನು ಅಥವಾ ಸಹಾಯಕನನ್ನು ಕಾಣಲಾರರು.
ಅವರು ನಿಮಗೆ ಸಹಾಯ ಮಾಡುವುದರಲ್ಲಿ ಅತ್ಯಂತ ಜಿಪುಣರಾಗಿದ್ದಾರೆ. ಭಯದ ಸನ್ನಿವೇಶವುಂಟಾದರೆ ಅವರು ನಿಮ್ಮನ್ನು ದಿಟ್ಟಿಸಿ ನೋಡುವುದ್ನು ನಿಮಗೆ ಕಾಣಬಹುದು. ಸಾವಿನ ದವಡೆಯಲ್ಲಿರುವ ವ್ಯಕ್ತಿಯ ಕಣ್ಣುಗಳಂತೆ ಅವರ ಕಣ್ಣುಗಳು ತಿರುಗುತ್ತವೆ. ಆದರೆ ಭಯವು ನಿವಾರಣೆಯಾದರೆ ಅವರು ಹರಿತವಾದ ನಾಲಗೆಗಳ ಮೂಲಕ ನಿಮ್ಮನ್ನು ಚುಚ್ಚಿ ಮಾತನಾಡುತ್ತಾರೆ. ಅವರು ಸಂಪತ್ತನ್ನು ಅತಿಯಾಗಿ ಆಸೆಪಡುತ್ತಾರೆ. ಅವರು ಸತ್ಯವಿಶ್ವಾಸಿಗಳಲ್ಲ. ಆದ್ದರಿಂದ ಅಲ್ಲಾಹು ಅವರ ಕರ್ಮಗಳನ್ನು ನಿಷ್ಫಲಗೊಳಿಸಿದನು. ಅದು ಅಲ್ಲಾಹನ ಮಟ್ಟಿಗೆ ಬಹಳ ಸುಲಭವಾಗಿದೆ.
ಮಿತ್ರಪಡೆಗಳು (ವೈರಿಗಳು) ಓಡಿಹೋಗಿರಲಿಕ್ಕಿಲ್ಲ ಎಂದು ಅವರು (ಕಪಟವಿಶ್ವಾಸಿಗಳು) ಭಾವಿಸುತ್ತಾರೆ. ಮಿತ್ರಪಡೆಗಳೇನಾದರೂ ಪುನಃ ಬಂದರೆ, ಗ್ರಾಮೀಣ ಅರಬ್ಬರೊಂದಿಗೆ ಸೇರಿ ಮರುಭೂಮಿಗೆ ಹೋಗಿ ಅಲ್ಲಿ ನಿಮ್ಮ ಬಗ್ಗೆ ಮಾಹಿತಿ ಕಲೆ ಹಾಕುತ್ತಾ ಬದುಕುತ್ತಿದ್ದರೆ ಎಷ್ಟು ಚೆನ್ನಾಗಿತ್ತು ಎಂದು ಅವರು ಚಿಂತಿಸುತ್ತಾರೆ. ಇನ್ನು ಅವರು ನಿಮ್ಮ ಜೊತೆ (ಮದೀನದಲ್ಲಿ) ಇದ್ದರೂ ಅವರು ಸ್ವಲ್ಪ ಮಾತ್ರ ಯುದ್ಧ ಮಾಡುವರು.
ಸತ್ಯವಿಶ್ವಾಸಿಗಳು ಮಿತ್ರಪಡೆಗಳನ್ನು ಕಂಡಾಗ ಹೇಳಿದರು: “ಇದೇ ಅಲ್ಲಾಹು ಮತ್ತು ಅವನ ಸಂದೇಶವಾಹಕರು ನಮಗೆ ವಾಗ್ದಾನ ಮಾಡಿದ್ದು. ಅಲ್ಲಾಹು ಮತ್ತು ಅವನ ಸಂದೇಶವಾಹಕರು ಸತ್ಯವನ್ನೇ ಹೇಳಿದ್ದಾರೆ.” ಅದು ಅವರಿಗೆ ವಿಶ್ವಾಸ ಮತ್ತು ಶರಣಾಗತಿಯನ್ನು ಮಾತ್ರ ಹೆಚ್ಚಿಸಿತು.
ಸತ್ಯವಿಶ್ವಾಸಿಗಳಲ್ಲಿ ಕೆಲವು ಪುರುಷರಿದ್ದಾರೆ. ಅವರು ಅಲ್ಲಾಹನೊಡನೆ ಮಾಡಿದ ಕರಾರನ್ನು ರುಜುವಾತುಪಡಿಸಿದ್ದಾರೆ. ಅವರಲ್ಲಿ ಕೆಲವರು (ಹುತಾತ್ಮರಾಗುವ ಮೂಲಕ) ತಮ್ಮ ಕರಾರನ್ನು ನೆರವೇರಿಸಿದರು. ಅವರಲ್ಲಿ ಕೆಲವರು ಅದನ್ನು ನಿರೀಕ್ಷಿಸುತ್ತಿದ್ದಾರೆ. ಅವರು ಅದರಲ್ಲಿ ಯಾವುದೇ ಬದಲಾವಣೆ ಮಾಡಲಿಲ್ಲ.
ಅಲ್ಲಾಹು ಸತ್ಯವಂತರಿಗೆ ಅವರ ಸತ್ಯದ ಪ್ರತಿಫಲವನ್ನು ನೀಡುವುದಕ್ಕಾಗಿ ಮತ್ತು ಅವನು ಬಯಸಿದರೆ ಕಪಟವಿಶ್ವಾಸಿಗಳನ್ನು ಶಿಕ್ಷಿಸುವುದಕ್ಕಾಗಿ ಅಥವಾ ಅವರ ಪಶ್ಚಾತ್ತಾಪವನ್ನು ಸ್ವೀಕರಿಸುವುದಕ್ಕಾಗಿ. ನಿಶ್ಚಯವಾಗಿಯೂ ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
ಅಲ್ಲಾಹು ಸತ್ಯನಿಷೇಧಿಗಳನ್ನು ಅವರ ರೋಷದೊಂದಿಗೇ ಮರಳಿ ಕಳುಹಿಸಿದನು. ಅವರು ಯಾವುದೇ ಲಾಭವನ್ನು ಪಡೆಯಲಿಲ್ಲ. ಯುದ್ಧದಲ್ಲಿ ಅಲ್ಲಾಹು ಸತ್ಯವಿಶ್ವಾಸಿಗಳಿಗೆ ಪರ್ಯಾಪ್ತನಾದನು. ಅಲ್ಲಾಹು ಮಹಾ ಶಕ್ತಿಶಾಲಿ ಮತ್ತು ಪ್ರಬಲನಾಗಿದ್ದಾನೆ.
ಸತ್ಯನಿಷೇಧಿಗಳಿಗೆ ಸಹಾಯ ಮಾಡಿದ ಗ್ರಂಥದವರನ್ನು (ಯಹೂದಿಗಳನ್ನು) ಅಲ್ಲಾಹು ಅವರ ಕೋಟೆಗಳಿಂದ ಕೆಳಗಿಳಿಸಿದನು ಮತ್ತು ಅವರ ಹೃದಯಗಳಲ್ಲಿ ಭೀತಿಯನ್ನು ಬಿತ್ತಿದನು. ಅವರಲ್ಲಿ ಒಂದು ಗುಂಪನ್ನು ನೀವು ಕೊಂದಿದ್ದೀರಿ ಮತ್ತು ಇನ್ನೊಂದು ಗುಂಪನ್ನು ಸೆರೆಹಿಡಿದಿದ್ದೀರಿ.[1]
[1] ಯಹೂದಿಗಳ ಒಂದು ಗೋತ್ರವಾದ ಬನೂ ಕುರೈಝದವರು ಮದೀನದ ಉತ್ತರ ಭಾಗದಲ್ಲಿ ವಾಸವಾಗಿದ್ದರು. ಇವರು ಮುಸ್ಲಿಮರೊಡನೆ ಒಪ್ಪಂದ ಮಾಡಿಕೊಂಡಿದ್ದರು. ಈ ಒಪ್ಪಂದದ ಪ್ರಕಾರ ಇವರಲ್ಲಿ ಒಬ್ಬರು ದಾಳಿಗೊಳಗಾದರೆ ಇನ್ನೊಬ್ಬರು ಸಹಾಯ ಮಾಡಬೇಕು. ಆದರೆ ಮುಸ್ಲಿಮರ ಮೇಲೆ ಸತ್ಯನಿಷೇಧಿಗಳು ದಾಳಿ ಮಾಡಿದಾಗ ಈ ಯಹೂದಿಗಳು ಒಪ್ಪಂದವನ್ನು ಮುರಿದು ಮುಸ್ಲಿಮರಿಗೆ ವಿರುದ್ಧವಾಗಿ ಸತ್ಯನಿಷೇಧಿಗಳಿಗೆ ಸಹಾಯ ಮಾಡಿದರು. ಅವರು ಒಪ್ಪಂದವನ್ನು ಮುರಿದ ಕಾರಣ ಖಂದಕ್ ಯುದ್ಧದ ನಂತರ ಮುಸ್ಲಿಮರು ಅವರ ವಿರುದ್ಧ ದಂಡೆತ್ತಿ ಹೋದರು. ಅವರು ಕೋಟೆಯಲ್ಲಿ ಅವಿತುಕೊಂಡರು. ಸುಮಾರು 25 ದಿನಗಳ ನಂತರ ಅವರು ಶರಣಾಗಿ ತಮ್ಮ ವಿಷಯದಲ್ಲಿ ತೀರ್ಪು ನೀಡುವ ಹಕ್ಕನ್ನು ಸಅದ್ ಬಿನ್ ಮುಆದ್‌ಗೆ ನೀಡಿದರು. ಸಅದ್ ಬಿನ್ ಮುಆದ್ ನೀಡಿದ ತೀರ್ಪಿನಂತೆ ಅವರಲ್ಲಿನ ಗಂಡಸರನ್ನು ಹತ್ಯೆ ಮಾಡಿ ಮಹಿಳೆಯರನ್ನು ಮತ್ತು ಮಕ್ಕಳನ್ನು ಖೈದಿಗಳಾಗಿ ಮಾಡಿಕೊಳ್ಳಲಾಯಿತು.
ಅಲ್ಲಾಹು ನಿಮ್ಮನ್ನು ಅವರ ಜಮೀನುಗಳ, ವಾಸ್ತವ್ಯಗಳ ಮತ್ತು ಆಸ್ತಿಗಳ ವಾರಸುದಾರರನ್ನಾಗಿ ಮಾಡಿದನು. ನಿಮ್ಮ ಪಾದಗಳು ಇನ್ನೂ ತುಳಿಯದ ಭೂಮಿಗಳಿಗೂ ಅವನು ನಿಮ್ಮನ್ನು ವಾರಸುದಾರರನ್ನಾಗಿ ಮಾಡಿದನು. ಅಲ್ಲಾಹು ಎಲ್ಲಾ ವಿಷಯಗಳಲ್ಲೂ ಸಾಮರ್ಥ್ಯವುಳ್ಳವನಾಗಿದ್ದಾನೆ.
ಪ್ರವಾದಿಯವರೇ! ನಿಮ್ಮ ಮಡದಿಯರೊಡನೆ ಹೇಳಿರಿ: “ನೀವು ಇಹಲೋಕ ಜೀವನವನ್ನು ಮತ್ತು ಅದರ ಅಲಂಕಾರವನ್ನು ಬಯಸುವುದಾದರೆ, ಬನ್ನಿ! ನಾನು ನಿಮಗೆ ಸ್ವಲ್ಪ ಸಂಪತ್ತನ್ನು ನೀಡಿ, ಅತ್ಯುತ್ತಮ ರೀತಿಯಲ್ಲಿ ನಿಮ್ಮನ್ನು ವಿಚ್ಛೇದಿಸುವೆನು.
ಆದರೆ ನೀವು ಅಲ್ಲಾಹು, ಅವನ ಸಂದೇಶವಾಹಕರು ಮತ್ತು ಪರಲೋಕ ಜೀವನವನ್ನು ಬಯಸುವುದಾದರೆ, ನಿಶ್ಚಯವಾಗಿಯೂ ನಿಮ್ಮಲ್ಲಿ ಒಳಿತು ಮಾಡುವವರಿಗೆ ಅಲ್ಲಾಹು ಮಹಾ ಪ್ರತಿಫಲವನ್ನು ಸಿದ್ಧಗೊಳಿಸಿದ್ದಾನೆ.”
ನಿಮ್ಮಲ್ಲಿ ಯಾರು ಅಲ್ಲಾಹನಿಗೆ ಮತ್ತು ಅವನ ಸಂದೇಶವಾಹಕರಿಗೆ ವಿನಮ್ರರಾಗಿರುತ್ತಾರೋ ಮತ್ತು ಸತ್ಕರ್ಮವೆಸಗುತ್ತಾರೋ ಅವರಿಗೆ ನಾವು ಇಮ್ಮಡಿ ಪ್ರತಿಫಲವನ್ನು ನೀಡುವೆವು. ಅವರಿಗೆ ನಾವು ಗೌರವಾನ್ವಿತ ಉಪಜೀವನವನ್ನು ಸಿದ್ಧಗೊಳಿಸಿದ್ದೇವೆ.
ಓ ಪ್ರವಾದಿಯ ಮಡದಿಯರೇ! ನೀವು ಇತರ ಮಹಿಳೆಯರಂತಲ್ಲ. ನೀವು ಅಲ್ಲಾಹನನ್ನು ಭಯಪಡುವುದಾದರೆ, ನೀವು ಮೃದುವಾಗಿ ಮಾತನಾಡಬೇಡಿ. ಏಕೆಂದರೆ ಅದರಿಂದ ಹೃದಯದಲ್ಲಿ ರೋಗವಿರುವವರು ನಿಮ್ಮ ಬಗ್ಗೆ ಕೆಟ್ಟ ಭಾವನೆಗಳನ್ನಿಟ್ಟುಕೊಳ್ಳಬಹುದು. ನೀವು ಯೋಗ್ಯವಾದ ಮಾತುಗಳನ್ನೇ ಆಡಿರಿ.
ನೀವು ನಿಮ್ಮ ಮನೆಗಳಲ್ಲೇ ಇರಿ. ಹಿಂದಿನ ಅಜ್ಞಾನಕಾಲದಂತೆ ನಿಮ್ಮ ಸೌಂದರ್ಯ ಪ್ರದರ್ಶನ ಮಾಡಬೇಡಿ. ನಮಾಝನ್ನು ಸಂಸ್ಥಾಪಿಸಿರಿ ಮತ್ತು ಝಕಾತ್ ನೀಡಿರಿ. ಅಲ್ಲಾಹು ಮತ್ತು ಅವನ ಸಂದೇಶವಾಹಕರ ಆಜ್ಞಾಪಾಲನೆ ಮಾಡಿರಿ. ಓ ಪ್ರವಾದಿಯ ಮನೆಯವರೇ! ಅಲ್ಲಾಹು ನಿಮ್ಮಿಂದ ಕೊಳೆಯನ್ನು ನಿವಾರಿಸಲು ಮತ್ತು ನಿಮ್ಮನ್ನು ಸಂಪೂರ್ಣ ಶುದ್ಧೀಕರಿಸಲು ಬಯಸುತ್ತಾನೆ.
ನಿಶ್ಚಯವಾಗಿಯೂ ಮುಸಲ್ಮಾನ ಪುರುಷರು ಮತ್ತು ಮಹಿಳೆಯರು, ಸತ್ಯವಿಶ್ವಾಸಿ ಪುರುಷರು ಮತ್ತು ಮಹಿಳೆಯರು, ದೇವಭಯವುಳ್ಳ ಪುರುಷರು ಮತ್ತು ಮಹಿಳೆಯರು, ಸತ್ಯವಂತ ಪುರುಷರು ಮತ್ತು ಮಹಿಳೆಯರು, ತಾಳ್ಮೆ ವಹಿಸುವ ಪುರುಷರು ಮತ್ತು ಮಹಿಳೆಯರು, ವಿನಮ್ರತೆ ತೋರುವ ಪುರುಷರು ಮತ್ತು ಮಹಿಳೆಯರು, ದಾನಧರ್ಮ ಮಾಡುವ ಪುರುಷರು ಮತ್ತು ಮಹಿಳೆಯರು, ಉಪವಾಸ ಆಚರಿಸುವ ಪುರುಷರು ಮತ್ತು ಮಹಿಳೆಯರು, ತಮ್ಮ ಗುಹ್ಯಭಾಗಗಳನ್ನು ಸಂರಕ್ಷಿಸುವ ಪುರುಷರು ಮತ್ತು ಮಹಿಳೆಯರು, ಅಲ್ಲಾಹನನ್ನು ಅತಿಯಾಗಿ ಸ್ಮರಿಸುವ ಪುರುಷರು ಮತ್ತು ಮಹಿಳೆಯರು—ಇವರಿಗೆ ಅಲ್ಲಾಹು ಕ್ಷಮೆ ಮತ್ತು ಮಹಾ ಪ್ರತಿಫಲವನ್ನು ಸಿದ್ಧಗೊಳಿಸಿದ್ದಾನೆ.
ಅಲ್ಲಾಹು ಮತ್ತು ಅವನ ಸಂದೇಶವಾಹಕರು ಯಾವುದೇ ಒಂದು ವಿಷಯವನ್ನು ತೀರ್ಮಾನಿಸಿದರೆ, ನಂತರ ಸತ್ಯವಿಶ್ವಾಸಿ ಪುರುಷರಿಗೆ ಅಥವಾ ಮಹಿಳೆಯರಿಗೆ ಅವರ ವಿಷಯಕ್ಕೆ ಸಂಬಂಧಿಸಿ ಯಾವುದೇ ಆಯ್ಕೆಯಿರುವುದಿಲ್ಲ. ಯಾರು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಆಜ್ಞೆಗಳನ್ನು ಉಲ್ಲಂಘಿಸುತ್ತಾನೋ—ಅವನು ಅತ್ಯಂತ ಸ್ಪಷ್ಟ ದುರ್ಮಾರ್ಗಕ್ಕೆ ಸಾಗಿದ್ದಾನೆ.
(ಪ್ರವಾದಿಯವರೇ) ಅಲ್ಲಾಹು ಅನುಗ್ರಹಗಳನ್ನು ನೀಡಿದ ಮತ್ತು ನೀವು ಕೂಡ ಅನುಗ್ರಹಗಳನ್ನು ನೀಡಿದ ವ್ಯಕ್ತಿಯೊಡನೆ, “ನಿನ್ನ ಪತ್ನಿಯನ್ನು ನಿನ್ನ ಬಳಿಯೇ ಇರಿಸು ಮತ್ತು ಅಲ್ಲಾಹನನ್ನು ಭಯಪಡು” ಎಂದು ನೀವು ಹೇಳಿದ ಸಂದರ್ಭ.[1] ಅಲ್ಲಾಹು ಬಹಿರಂಗಪಡಿಸಲಿದ್ದ ಒಂದು ವಿಷಯವನ್ನು ನೀವು ನಿಮ್ಮ ಹೃದಯದಲ್ಲಿ ಮುಚ್ಚಿಟ್ಟಿರಿ. ನೀವು ಜನರನ್ನು ಭಯಪಟ್ಟಿರಿ. ಆದರೆ ನೀವು ಭಯಪಡಲು ಅಲ್ಲಾಹು ಹೆಚ್ಚು ಅರ್ಹನಾಗಿದ್ದಾನೆ. ನಂತರ ಝೈದ್ (ಪ್ರವಾದಿಯ ದತ್ತುಪುತ್ರ) ಅವಳಿಂದ ತನ್ನ ಅಗತ್ಯವನ್ನು ಪೂರೈಸಿದಾಗ, ನಾವು ಅವಳನ್ನು ನಿಮಗೆ ವಿವಾಹ ಮಾಡಿಕೊಟ್ಟೆವು.[2] ಇದೇಕೆಂದರೆ, ಸತ್ಯವಿಶ್ವಾಸಿಗಳಿಗೆ ಅವರ ದತ್ತುಪುತ್ರರ ಪತ್ನಿಯರನ್ನು ವಿವಾಹವಾಗುವ ವಿಷಯದಲ್ಲಿ ಯಾವುದೇ ಸಂಕಟವಾಗದಿರುವುದಕ್ಕಾಗಿ—ಆ ದತ್ತುಪುತ್ರರು ಅವರಿಂದ ತಮ್ಮ ಅಗತ್ಯವನ್ನು ಪೂರೈಸಿದ ಬಳಿಕ. ಅಲ್ಲಾಹನ ಆಜ್ಞೆಯು ನೆರವೇರುವಂತದ್ದೇ ಆಗಿದೆ.
[1] ಝೈದ್ ಬಿನ್ ಹಾರಿಸ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗುಲಾಮರಾಗಿದ್ದರು. ನಂತರ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಅವರನ್ನು ಸ್ವತಂತ್ರಗೊಳಿಸಿ ದತ್ತುಪುತ್ರನಾಗಿ ಸ್ವೀಕರಿಸಿದರು. ತನ್ನ ಸೋದರ ಸಂಬಂಧಿ ಜಹ್‌ಶ್‌ನ ಮಗಳು ಝೈನಬರನ್ನು ಅವರಿಗೆ ವಿವಾಹ ಮಾಡಿಕೊಟ್ಟರು. ಆದರೆ ದಂಪತಿಗಳ ಮಧ್ಯೆ ಮನಸ್ತಾಪವುಂಟಾಗಿ ದಾಂಪತ್ಯದಲ್ಲಿ ಬಿರುಕು ಗೋಚರಿಸಿತು. ಬಿರುಕು ಉಲ್ಬಣಿಸಿದಾಗ ಝೈದ್ ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಬಳಿಗೆ ಬಂದು ತಲಾಕ್ ನೀಡಲು ಅನುಮತಿ ಕೇಳಿದರು. ಆದರೆ ಅದು ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಇಷ್ಟವಿರಲಿಲ್ಲ. ಅವರು ದಾಂಪತ್ಯ ಮುಂದುವರಿಸಲು ಹೇಳಿದರು. [2] ಪ್ರವಾದಿಯವರ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ದತ್ತುಪುತ್ರ ಝೈದ್ ತನ್ನ ಪತ್ನಿ ಝೈನಬರಿಗೆ ವಿಚ್ಛೇದನ ನೀಡಿದರು. ದತ್ತುಪುತ್ರರು ವಿಚ್ಛೇದಿಸಿದ ಮಹಿಳೆಯನ್ನು ದತ್ತು ಪಡೆದವರು ವಿವಾಹವಾಗಬಾರದು ಎಂಬ ರೂಢಿ ಅರೇಬಿಯಾದಲ್ಲಿ ಅಸ್ತಿತ್ವದಲ್ಲಿತ್ತು. ಅಜ್ಞಾನಕಾಲದ ಈ ರೂಢಿಯನ್ನು ನಿರ್ಮೂಲನ ಮಾಡಲು ಅಲ್ಲಾಹನ ಆಜ್ಞೆಯಂತೆ ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಝೈನಬರನ್ನು ವಿವಾಹವಾದರು.
ಅಲ್ಲಾಹು ಅವನ ಪ್ರವಾದಿಗೆ ಯಾವೆಲ್ಲಾ ವಿಷಯಗಳನ್ನು ನಿಶ್ಚಯಿಸಿದ್ದಾನೋ ಅದರಲ್ಲಿ ಪ್ರವಾದಿಗೆ ಯಾವುದೇ ಸಂಕಟವಾಗಬಾರದು. ಇದಕ್ಕೆ ಮೊದಲಿನ ಪ್ರವಾದಿಗಳ ಮೇಲೂ ಅಲ್ಲಾಹು ರಿವಾಜು ನಡೆಯುತ್ತಿತ್ತು. ಅಲ್ಲಾಹನ ಆಜ್ಞೆಯು ನಿಶ್ಚಯಿಸಲಾದ ತೀರ್ಮಾನವಾಗಿದೆ.
ಮುಹಮ್ಮದ್ ನಿಮ್ಮ ಪುರುಷರಲ್ಲಿ ಯಾರಿಗೂ ತಂದೆಯಲ್ಲ.[1] ಆದರೆ ಅವರು ಅಲ್ಲಾಹನ ಸಂದೇಶವಾಹಕರು ಮತ್ತು ಎಲ್ಲಾ ಪ್ರವಾದಿಗಳ ಮೊಹರಾಗಿದ್ದಾರೆ.[2] ಅಲ್ಲಾಹು ಎಲ್ಲಾ ವಿಷಯಗಳ ಬಗ್ಗೆ ತಿಳಿದವನಾಗಿದ್ದಾನೆ.
[1] ಪ್ರವಾದಿಯವರು (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಝೈನಬರನ್ನು ವಿವಾಹವಾದಾಗ, ಮುಹಮ್ಮದ್ ತನ್ನ ಸೊಸೆಯನ್ನೇ ವಿವಾಹವಾಗಿದ್ದಾರೆ ಎಂದು ಸತ್ಯನಿಷೇಧಿಗಳು ಮತ್ತು ಕಪಟವಿಶ್ವಾಸಿಗಳು ಗುಲ್ಲೆಬ್ಬಿಸಿದರು. ಇದಕ್ಕೆ ಉತ್ತರವಾಗಿ ಈ ವಚನವು ಅವತೀರ್ಣವಾಯಿತು. ಅಂದರೆ ಪ್ರವಾದಿಯವರಿಗೆ (ಅವರ ಮೇಲೆ ಅಲ್ಲಾಹನ ಕೃಪೆ ಮತ್ತು ಶಾಂತಿಯಿರಲಿ) ಗಂಡು ಮಕ್ಕಳಿಲ್ಲ. ನಿಮ್ಮಲ್ಲಿ ಯಾರೂ ಅವರ ಗಂಡು ಮಕ್ಕಳಲ್ಲ. ಅವರ ದತ್ತುಪುತ್ರ ಝೈದ್ ಅವರ ಸ್ವಂತ ಮಗನಲ್ಲದ್ದರಿಂದ ಝೈನಬ ಅವರ ಸೊಸೆಯಲ್ಲ. [2] ಅಂದರೆ ಅವರು ಅಂತಿಮ ಪ್ರವಾದಿ. ಅವರ ನಂತರ ಬೇರೆ ಪ್ರವಾದಿ ಬರುವುದಿಲ್ಲ.
ನಿಮ್ಮ ಮೇಲೆ ಅನುಗ್ರಹಗಳನ್ನು ಸುರಿಸುವವನು ಅವನೇ. ಅವನ ದೇವದೂತರುಗಳು ನಿಮಗಾಗಿ ಪ್ರಾರ್ಥಿಸುತ್ತಾರೆ. ನಿಮ್ಮನ್ನು ಅಂಧಕಾರಗಳಿಂದ ಬೆಳಕಿಗೆ ತರುವುದಕ್ಕಾಗಿ. ಅವನು ಸತ್ಯವಿಶ್ವಾಸಿಗಳ ಮೇಲೆ ಅತ್ಯಧಿಕ ದಯೆಯುಳ್ಳವನಾಗಿದ್ದಾನೆ.
ಸತ್ಯನಿಷೇಧಿಗಳನ್ನು ಮತ್ತು ಕಪಟವಿಶ್ವಾಸಿಗಳನ್ನು ಅನುಸರಿಸಬೇಡಿ. ಅವರು ನೀಡುವ ತೊಂದರೆಗಳನ್ನು ನಿರ್ಲಕ್ಷಿಸಿರಿ ಮತ್ತು ಅಲ್ಲಾಹನಲ್ಲಿ ಭರವಸೆಯಿಡಿ. ಕಾರ್ಯನಿರ್ವಾಹಕನಾಗಿ ಅಲ್ಲಾಹು ಸಾಕು.
ಓ ಸತ್ಯವಿಶ್ವಾಸಿಗಳೇ! ನೀವು ಸತ್ಯವಿಶ್ವಾಸಿ ಮಹಿಳೆಯರನ್ನು ವಿವಾಹವಾಗಿ, ನಂತರ ಅವರೊಡನೆ ಲೈಂಗಿಕ ಸಂಪರ್ಕ ಮಾಡುವುದಕ್ಕೆ ಮೊದಲೇ ಅವರಿಗೆ ವಿಚ್ಛೇದನ ನೀಡಿದರೆ, ನೀವು ಎಣಿಸುವ ಇದ್ದಃ (ದೀಕ್ಷಾಕಾಲ) ವನ್ನು ಆಚರಿಸಬೇಕಾದ ಹೊಣೆ ಅವರಿಗಿಲ್ಲ. ನೀವು ಅವರಿಗೆ ಏನಾದರೂ ನೀಡಿರಿ ಮತ್ತು ಅತ್ಯುತ್ತಮ ರೀತಿಯಲ್ಲಿ ಅವರನ್ನು ಕಳುಹಿಸಿಕೊಡಿ.
ಓ ಪ್ರವಾದಿಯವರೇ! ನೀವು ವಧುದಕ್ಷಿಣೆ (ಮಹರ್) ನೀಡಿ ವಿವಾಹವಾದ ನಿಮ್ಮ ಮಡದಿಯರನ್ನು ನಾವು ನಿಮಗೆ ಧರ್ಮಸಮ್ಮತಗೊಳಿಸಿದ್ದೇವೆ. ಅದೇ ರೀತಿ ಅಲ್ಲಾಹು ನಿಮಗೆ ಯುದ್ಧಾರ್ಜಿತವಾಗಿ ನೀಡಿದ ಗುಲಾಮ ಸ್ತ್ರೀಯರನ್ನು, ನಿಮ್ಮೊಂದಿಗೆ ವಲಸೆ (ಹಿಜ್ರ) ಮಾಡಿದ ನಿಮ್ಮ ತಂದೆಯ ಸಹೋದರರ ಪುತ್ರಿಯರನ್ನು, ತಂದೆಯ ಸಹೋದರಿಯ ಪುತ್ರಿಯರನ್ನು, ತಾಯಿಯ ಸಹೋದರರ ಪುತ್ರಿಯರನ್ನು ಮತ್ತು ತಾಯಿಯ ಸಹೋದರಿಯ ಪುತ್ರಿಯರನ್ನು ಧರ್ಮಸಮ್ಮತಗೊಳಿಸಿದ್ದೇವೆ. ಅದೇ ರೀತಿ ಸತ್ಯವಿಶ್ವಾಸಿಯಾದ ಹೆಣ್ಣು ತನ್ನ ದೇಹವನ್ನು ಪ್ರವಾದಿಗೆ ನೀಡಲು ಬಯಸುವುದಾದರೆ ಮತ್ತು ಪ್ರವಾದಿಯು ಆಕೆಯನ್ನು ವಿವಾಹವಾಗಲು ಬಯಸುವುದಾದರೆ ಅವಳು ಕೂಡ ಧರ್ಮಸಮ್ಮತವಾಗಿದ್ದಾಳೆ. ಇದು ವಿಶೇಷವಾಗಿ ನಿಮಗೆ ಮಾತ್ರವಾಗಿದೆ. ಸತ್ಯವಿಶ್ವಾಸಿಗಳಿಗೆ ಈ ಅವಕಾಶವಿಲ್ಲ. ನಾವು ಅವರ ಪತ್ನಿಯರ ಮತ್ತು ಗುಲಾಮ ಸ್ತ್ರೀಯರ ವಿಷಯದಲ್ಲಿ ಏನು ನಿಯಮ ಮಾಡಿದ್ದೇವೆಂದು ನಮಗೆ ಚೆನ್ನಾಗಿ ತಿಳಿದಿದೆ. ಇದು ನಿಮಗೆ ಯಾವುದೇ ತೊಂದರೆ ಉಂಟಾಗದಿರಲಿ ಎಂದು. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
(ಪ್ರವಾದಿಯವರೇ) ಅವರಲ್ಲಿ ನೀವು ಇಚ್ಛಿಸುವವರನ್ನು ದೂರವಿಡಬಹುದು ಮತ್ತು ನೀವು ಇಚ್ಛಿಸುವವರನ್ನು ಹತ್ತಿರವಿಡಬಹುದು. ನೀವು ದೂರವಿಟ್ಟ ಪತ್ನಿಯರಲ್ಲಿ ಯಾರನ್ನಾದರೂ ನೀವು ಹತ್ತಿರಕ್ಕೆ ಕರೆದರೆ ಅದರಲ್ಲಿ ನಿಮಗೆ ದೋಷವಿಲ್ಲ. ಅವರ ಕಣ್ಣು ತಂಪಾಗಲು, ಅವರು ಬೇಸರಪಡದಿರಲು ಮತ್ತು ನೀವು ಅವರಿಗೆ ನೀಡಿರುವುದರಲ್ಲಿ ಅವರೆಲ್ಲರೂ ಸಂತೃಪ್ತರಾಗಲು ಇದು ಅತ್ಯಂತ ಸೂಕ್ತವಾಗಿದೆ. ನಿಮ್ಮ ಹೃದಯಗಳಲ್ಲಿ ಏನಿದೆಯೆಂದು ಅಲ್ಲಾಹು ತಿಳಿಯುತ್ತಾನೆ. ಅಲ್ಲಾಹು ಸರ್ವಜ್ಞನು ಮತ್ತು ಸಹಿಷ್ಣುತೆಯುಳ್ಳನಾಗಿದ್ದಾನೆ.
ಇನ್ನು ಮುಂದೆ ಬೇರೆ ಸ್ತ್ರೀಯರನ್ನು ವಿವಾಹವಾಗುವುದು ನಿಮಗೆ ಧರ್ಮಸಮ್ಮತವಲ್ಲ. ಅದೇ ರೀತಿ ಇವರ ಬದಲಿಗೆ ಬೇರೆಯವರನ್ನು ವಿವಾಹವಾಗುವುದು ಕೂಡ ನಿಮಗೆ ಧರ್ಮಸಮ್ಮತವಲ್ಲ. ಅವರ ಅಂದವು ನಿಮ್ಮನ್ನು ಮಂತ್ರಮುಗ್ಧಗೊಳಿಸಿದರೂ ಸಹ. ಆದರೆ ನಿಮ್ಮ ಗುಲಾಮಸ್ತ್ರೀಯರ ಹೊರತು. ಅಲ್ಲಾಹು ಎಲ್ಲ ವಿಷಯಗಳನ್ನೂ ಗಮನಿಸುವವನಾಗಿದ್ದಾನೆ.
ಓ ಸತ್ಯವಿಶ್ವಾಸಿಗಳೇ! ನಿಮಗೆ ಅನುಮತಿ ಸಿಗುವ ತನಕ ನೀವು ಆಹಾರ ಸೇವಿಸಲು ಪ್ರವಾದಿಯ ಮನೆಗಳನ್ನು ಪ್ರವೇಶಿಸಬೇಡಿ—ಆಹಾರ ಸಿದ್ಧವಾಗುವುದನ್ನು ಕಾಯುತ್ತಾ ಅಲ್ಲಿ ಕೂರುವುದಕ್ಕಾಗಿ. ಬದಲಿಗೆ, ನಿಮ್ಮನ್ನು ಕರೆಯಲಾದರೆ ಒಳಗೆ ಪ್ರವೇಶಿಸಿರಿ ಮತ್ತು ಆಹಾರ ಸೇವಿಸಿದ ಬಳಿಕ ಹೊರಟು ಹೋಗಿರಿ. ಅಲ್ಲಿ ಹರಟೆ ಹೊಡೆಯುತ್ತಾ ಕೂರಬೇಡಿ. ಇದರಿಂದ ಪ್ರವಾದಿಯವರಿಗೆ ಖಂಡಿತ ತೊಂದರೆಯಾಗುತ್ತದೆ. ಅದನ್ನು ನಿಮ್ಮೊಡನೆ ಹೇಳಲು ಅವರು ಸಂಕೋಚಪಡುತ್ತಾರೆ. ಆದರೆ ಸತ್ಯವನ್ನು ಹೇಳಲು ಅಲ್ಲಾಹು ಸಂಕೋಚಪಡುವುದಿಲ್ಲ. ನೀವು ಅವರೊಡನೆ (ಪ್ರವಾದಿ ಪತ್ನಿಯರೊಡನೆ) ಏನಾದರೂ ವಸ್ತುವನ್ನು ಕೇಳುವುದಾದರೆ ಪರದೆಯ ಹಿಂದಿನಿಂದ ಕೇಳಿರಿ. ಅದು ನಿಮ್ಮ ಮತ್ತು ಅವರ ಹೃದಯಗಳಿಗೆ ಹೆಚ್ಚು ಪರಿಶುದ್ಧಿಯನ್ನು ನೀಡುತ್ತದೆ. ಅಲ್ಲಾಹನ ಪ್ರವಾದಿಗೆ ತೊಂದರೆ ಕೊಡುವುದು ನಿಮಗೆ ಧರ್ಮಸಮ್ಮತವಲ್ಲ. ಅದೇ ರೀತಿ ಅವರ ನಿಧನದ ಬಳಿಕ ಅವರ ಪತ್ನಿಯರನ್ನು ಯಾವುದೇ ಸ್ಥಿತಿಯಲ್ಲೂ ವಿವಾಹವಾಗುವುದು ನಿಮಗೆ ಧರ್ಮಸಮ್ಮತವಲ್ಲ. ನಿಶ್ಚಯವಾಗಿಯೂ ಅವೆಲ್ಲವೂ ಅಲ್ಲಾಹನ ದೃಷ್ಟಿಯಲ್ಲಿ ಗಂಭೀರ ಅಪರಾಧಗಳಾಗಿವೆ.
ಮಹಿಳೆಯರು ಅವರ ತಂದೆಯಂದಿರು, ಪುತ್ರರು, ಸಹೋದರರು, ಸಹೋದರ ಪುತ್ರರು, ಸಹೋದರಿ ಪುತ್ರರು, ಅವರದ್ದೇ ಮಹಿಳೆಯರು ಮತ್ತು ಅವರ ಅಧೀನದಲ್ಲಿರುವ ಗುಲಾಮರು ಮುಂತಾದವರ ಮುಂದೆ (ಹಿಜಾಬ್ ಧರಿಸದೆ) ಬರುವುದರಲ್ಲಿ ತೊಂದರೆಯಿಲ್ಲ. (ಮಹಿಳೆಯರೇ) ನೀವು ಅಲ್ಲಾಹನನ್ನು ಭಯಪಡಿರಿ. ನಿಶ್ಚಯವಾಗಿಯೂ ಅಲ್ಲಾಹು ಎಲ್ಲಾ ವಿಷಯಗಳಿಗೂ ಸಾಕ್ಷಿಯಾಗಿದ್ದಾನೆ.
ನಿಶ್ಚಯವಾಗಿಯೂ ಅಲ್ಲಾಹು ಪ್ರವಾದಿಯ ಮೇಲೆ ಕೃಪೆ ತೋರುತ್ತಾನೆ ಮತ್ತು ದೇವದೂತರುಗಳು ಅದಕ್ಕಾಗಿ ಪ್ರಾರ್ಥಿಸುತ್ತಾರೆ. ಓ ಸತ್ಯವಿಶ್ವಾಸಿಗಳೇ! ನೀವು ಕೂಡ ಅವರ ಮೇಲೆ ಕೃಪೆ ಮತ್ತು ಶಾಂತಿ ವರ್ಷಿಸಲು ಪ್ರಾರ್ಥಿಸಿರಿ.
ನಿಶ್ಚಯವಾಗಿಯೂ ಅಲ್ಲಾಹು ಮತ್ತು ಅವನ ಸಂದೇಶವಾಹಕರಿಗೆ ತೊಂದರೆ ಕೊಡುವವರನ್ನು ಅಲ್ಲಾಹು ಇಹಲೋಕದಲ್ಲೂ, ಪರಲೋಕದಲ್ಲೂ ಶಪಿಸಿದ್ದಾನೆ. ಅವರಿಗೆ ಅತ್ಯಂತ ಅವಮಾನಕರ ಶಿಕ್ಷೆಯನ್ನು ಸಿದ್ಧಗೊಳಿಸಿದ್ದಾನೆ.
ಸತ್ಯವಿಶ್ವಾಸಿ ಪುರುಷರು ಮತ್ತು ಮಹಿಳೆಯರು ಯಾವುದೇ ತಪ್ಪು ಮಾಡದಿದ್ದರೂ ಸಹ ಅವರಿಗೆ ತೊಂದರೆ ಕೊಡುವವರು ಯಾರೋ ಅವರು ಮಹಾ ಸುಳ್ಳಾರೋಪವನ್ನು ಮತ್ತು ಸ್ಪಷ್ಟ ಪಾಪವನ್ನು ಹೊತ್ತುಕೊಳ್ಳುತ್ತಾರೆ.
ಓ ಪ್ರವಾದಿಯವರೇ! ನಿಮ್ಮ ಮಡದಿಯರಿಗೆ, ಪುತ್ರಿಯರಿಗೆ ಮತ್ತು ಸತ್ಯವಿಶ್ವಾಸಿ ಮಹಿಳೆಯರಿಗೆ—ಅವರು ತಮ್ಮ ಮೈಮೇಲೆ ಚಾದರಗಳನ್ನು ಹೊದ್ದುಕೊಳ್ಳಲು ಹೇಳಿರಿ. ಇದರಿಂದ ಅವರನ್ನು ಬಹಳ ಬೇಗ ಗುರುತು ಹಚ್ಚಲು ಸಾಧ್ಯವಾಗುತ್ತದೆ ಮತ್ತು ಅವರಿಗೆ ಕಿರುಕುಳಗಳು ಉಂಟಾಗುವುದಿಲ್ಲ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
ಕಪಟವಿಶ್ವಾಸಿಗಳು, ಹೃದಯಗಳಲ್ಲಿ ರೋಗವಿರುವವರು ಮತ್ತು ಮದೀನದಲ್ಲಿ ಸುಳ್ಳು ವದಂತಿ ಹಬ್ಬಿಸುವವರು ಅದನ್ನು ನಿಲ್ಲಿಸದಿದ್ದರೆ ನಾವು ನಿಮಗೆ ಖಂಡಿತ ಅವರ ಮೇಲೆ ಹತೋಟಿಯನ್ನು ನೀಡುತ್ತೇವೆ. ನಂತರ ಅವರು ಸ್ವಲ್ಪ ದಿನಗಳವರೆಗೆ ಮಾತ್ರ ನಿಮ್ಮೊಡನೆ ಅಲ್ಲಿ (ಮದೀನದಲ್ಲಿ) ಇರಲು ಸಾಧ್ಯ.
ಓ ಸತ್ಯವಿಶ್ವಾಸಿಗಳೇ! ಮೂಸಾರಿಗೆ ತೊಂದರೆ ಕೊಟ್ಟ ಜನರಂತೆ ನೀವಾಗಬೇಡಿ. ಅವರು ಏನು ಮಾತು ಹೇಳಿದರೋ ಅದರಿಂದ ಅಲ್ಲಾಹು ಅವರನ್ನು (ಮೂಸಾರನ್ನು) ಮುಕ್ತಗೊಳಿಸಿದನು. ಅವರು (ಮೂಸಾ) ಅಲ್ಲಾಹನ ಬಳಿ ಉತ್ಕೃಷ್ಟರಾಗಿದ್ದಾರೆ.
ಹಾಗಾದರೆ ಅಲ್ಲಾಹು ನಿಮಗೆ ನಿಮ್ಮ ಕರ್ಮಗಳನ್ನು ಸರಿಪಡಿಸುವನು ಮತ್ತು ನಿಮ್ಮ ಪಾಪಗಳನ್ನು ಕ್ಷಮಿಸುವನು. ಯಾರು ಅಲ್ಲಾಹು ಮತ್ತು ಅವನ ಸಂದೇಶವಾಹಕರ ಆಜ್ಞೆಗಳನ್ನು ಪಾಲಿಸುತ್ತಾನೋ ಅವನು ಮಹಾ ವಿಜಯವನ್ನು ಗಳಿಸಿದ್ದಾನೆ.
ನಿಶ್ಚಯವಾಗಿಯೂ ನಾವು ಆ ವಿಶ್ವಸ್ತತೆಯನ್ನು ಭೂಮ್ಯಾಕಾಶಗಳು ಮತ್ತು ಪರ್ವತಗಳ ಮುಂದೆ ಇಟ್ಟಾಗ, ಅದನ್ನು ವಹಿಸಿಕೊಳ್ಳಲು ಅವೆಲ್ಲವೂ ನಿರಾಕರಿಸಿದವು ಮತ್ತು ಅದನ್ನು ಭಯಪಟ್ಟವು. ಆದರೆ ಮನುಷ್ಯನು ಅದನ್ನು ವಹಿಸಿಕೊಂಡನು. ಮನುಷ್ಯನು ಮಹಾ ಅಕ್ರಮಿ ಮತ್ತು ಅವಿವೇಕಿಯಾಗಿದ್ದಾನೆ.
ಅಲ್ಲಾಹು ಕಪಟವಿಶ್ವಾಸಿ ಪುರುಷರನ್ನು ಮತ್ತು ಮಹಿಳೆಯರನ್ನು ಹಾಗೂ ಬಹುದೇವವಿಶ್ವಾಸಿ ಪುರುಷರನ್ನು ಮತ್ತು ಮಹಿಳೆಯನ್ನು ಶಿಕ್ಷಿಸುವುದಕ್ಕಾಗಿ ಹಾಗೂ ಸತ್ಯವಿಶ್ವಾಸಿ ಪುರುಷರು ಮತ್ತು ಮಹಿಳೆಯರ ಪಶ್ಚಾತ್ತಾಪವನ್ನು ಸ್ವೀಕರಿಸುವುದಕ್ಕಾಗಿ. ಅಲ್ಲಾಹು ಕ್ಷಮಿಸುವವನು ಮತ್ತು ದಯೆ ತೋರುವವನಾಗಿದ್ದಾನೆ.
Contents of the translations can be downloaded and re-published, with the following terms and conditions:
1. No modification, addition, or deletion of the content.
2. Clearly referring to the publisher and the source (QuranEnc.com).
3. Mentioning the version number when re-publishing the translation.
4. Keeping the transcript information inside the document.
5. Notifying the source (QuranEnc.com) of any note on the translation.
6. Updating the translation according to the latest version issued from the source (QuranEnc.com).
7. Inappropriate advertisements must not be included when displaying translations of the meanings of the Noble Quran.
Njeñtudi wiɗto ngoo:
API specs
Endpoints:
Sura translation
GET / https://quranenc.com/api/v1/translation/sura/{translation_key}/{sura_number} description: get the specified translation (by its translation_key) for the speicified sura (by its number)
Parameters: translation_key: (the key of the currently selected translation) sura_number: [1-114] (Sura number in the mosshaf which should be between 1 and 114)
Returns:
json object containing array of objects, each object contains the "sura", "aya", "translation" and "footnotes".
GET / https://quranenc.com/api/v1/translation/aya/{translation_key}/{sura_number}/{aya_number} description: get the specified translation (by its translation_key) for the speicified aya (by its number sura_number and aya_number)
Parameters: translation_key: (the key of the currently selected translation) sura_number: [1-114] (Sura number in the mosshaf which should be between 1 and 114) aya_number: [1-...] (Aya number in the sura)
Returns:
json object containing the "sura", "aya", "translation" and "footnotes".