ಅವರು ಹೇಳುತ್ತಾರೆ: ನೀವು ಯಾವುದರೆಡೆಗೆ ನಮ್ಮನ್ನು ಅಹ್ವಾನಿಸುತ್ತಿರುವಿರೋ ಅದರ ಬಗ್ಗೆ ನಮ್ಮ ಹೃದಯಗಳು ಪರದೆಯಲ್ಲಿವೆ ಮತ್ತು ನಮ್ಮ ಕಿವಿಗಳು ಕಿವುಡಾಗಿದೆ ಹಾಗೂ ನಮ್ಮ ಮತ್ತು ನಿಮ್ಮ ನಡುವೆ ಒಂದು ತೆರೆ ಬಿದ್ದಿದೆ. ಆದ್ದರಿಂದ ನೀವು ನಿಮ್ಮಕಾರ್ಯವೆಸಗಿ, ಮತ್ತು ನಾವು ನಮ್ಮ ಕಾರ್ಯವೆಸಗುತ್ತೇವೆ.
ಓ ಪ್ರವಾದಿಯವರೇ ಹೇಳಿರಿ: ನಾನು ನಿಮ್ಮಂತಹ ಒಬ್ಬ ಮನುಷ್ಯನಾಗಿದ್ದೇನೆ. ನಿಮ್ಮ ಆರಾಧ್ಯನು ಏಕೈಕ ಆರಾಧ್ಯನೆಂದು ನನ್ನೆಡೆಗೆ ದಿವ್ಯವಾಣಿ ಮಾಡಲಾಗುತ್ತದೆ. ಆದ್ದರಿಂದ ನೀವು ಅವನೆಡೆಗೆ ಸ್ಥಿರಚಿತ್ತರಾಗಿ ಅವನಲ್ಲಿ ಕ್ಷಮೆ ಬೇಡಿರಿ ಮತ್ತು ಬಹುದೇವಾರಾಧಕರಿಗೆ ಮಹಾನಾಶವಿದೆ.
ಹೇಳಿರಿ: ನೀವು ಭೂಮಿಯನ್ನು ಎರಡು ದಿನಗಳಲ್ಲಿ ಸೃಷ್ಟಿಸಿದ ಅಲ್ಲಾಹನನ್ನು ನಿರಾಕರಿಸುತ್ತಿದ್ದೀರಾ? ಹಾಗೂ ಇತರರನ್ನು ಅವನಿಗೆ ಸರಿಸಮಾನರನ್ನಾಗಿ ಕಲ್ಪಿಸುತ್ತಿದ್ದೀರಾ? ಅವನೇ ಸರ್ವಲೋಕಗಳ ಪಾಲಕ ಪ್ರಭು.
ಅವನು ಭೂಮಿಯ ಮೇಲೆ ಪರ್ವತಗಳನ್ನು ನಾಟಿಬಿಟ್ಟನು. ಮತ್ತು ಅದರಲ್ಲಿ ಸಮೃದ್ಧಿಯನ್ನು ಇರಿಸಿದನು. ಹಾಗೂ ನಾಲ್ಕು ದಿನಗಳಲ್ಲಿ ಅಪೇಕ್ಷಕರಿಗೆ ಅವರ ಅಗತ್ಯಕ್ಕೆ ತಕ್ಕಂತೆ ಅದರಲ್ಲಿ ಆಹಾರದ ವ್ಯವಸ್ಥೆಯನ್ನು ಮಾಡಿದನು.
ಬಳಿಕ ಅವನು ಆಕಾಶದೆಡೆಗೆ ಗಮನಹರಿಸಿದನು ಅದು ಧೂಮವಾಗಿತ್ತು. ಆಗ ಅವನು(ಅಲ್ಲಾಹ್) ಅದಕ್ಕೂ, ಭೂಮಿಗೂ ಹೇಳಿದನು: ನೀವಿಬ್ಬರೂ ವಿಧೇಯರಾಗಿ ಇಲ್ಲವೇ ಅನಿವಾರ್ಯವಾಗಿ ಬಂದು ಬಿಡಿರಿ. ಅವೆರಡೂ ನಾವು ವಿಧೇಯರಾಗಿ ಬಂದೆವು ಎಂದು ಹೇಳಿದವು.