ಅವರು (ತಮ್ಮ ಭ್ರಮೆಯಲ್ಲಿ) ಅಲ್ಲಾಹನನ್ನು ಮತ್ತು ಸತ್ಯವಿಶ್ವಾಸಿಗಳನ್ನು ವಂಚಿಸಲು ಪ್ರಯತ್ನಿಸುತ್ತಾರೆ. ವಾಸ್ತವದಲ್ಲಿ ಅವರು ಸ್ವತಃ ತಮ್ಮನ್ನೇ ವಂಚಿಸಿಕೊಳ್ಳುತ್ತಿದ್ದಾರೆ, ಆದರೆ ಅವರು ಗ್ರಹಿಸುವುದಿಲ್ಲ.
ಇತರ ಜನರು (ಪೈಗಂಬರರ ಅನುಚರರು) ವಿಶ್ವಾಸವಿರಿಸಿದ ಹಾಗೆ ನೀವು ವಿಶ್ವಾಸವಿಸಿರಿ ಎಂದು ಅವರೊಡನೆ ಹೇಳಲಾದರೆ, ಏನು? ಮೂರ್ಖರು ವಿಶ್ವಾಸವಿರಿಸಿದ ಹಾಗೆ ನಾವು ವಿಶ್ವಾಸವಿರಿಸಬೇಕೆ? ಎಂದು ಅವರು ಹೇಳುತ್ತಾರೆ. ಜಾಗೃತೆ! ನಿಜವಾಗಿಯು ಅವರೇ ಮೂರ್ಖರಾಗಿದ್ದಾರೆ. ಆದರೆ ಅವರು ಅರಿಯುವುದಿಲ್ಲ.
ಅವರು ವಿಶ್ವಾಸಿಗಳನ್ನು ಭೇಟಿಯಾದಾಗ ನಾವು ವಿಶ್ವಾಸಿಗಳಾಗಿದ್ದೇವೆ ಎಂದು ಹೇಳುತ್ತಾರೆ. ಹಾಗೂ ಅವರು ತಮ್ಮ (ಒಡನಾಡಿಗಳಾದ) ಶೈತಾನರನ್ನು ಏಕಾಂತದಲ್ಲಿ ಭೇಟಿಯಾದಾಗ, ನಾವು ನಿಮ್ಮೊಂದಿಗಿದ್ದೇವೆ ಎನ್ನುತ್ತಾರೆ. ನಾವಂತು ಅವರನ್ನು (ವಿಶ್ವಾಸಿಗಳನ್ನು) ಗೇಲಿ ಮಾಡುವವರಾಗಿದ್ದೇವೆ (ಎನ್ನುತ್ತಾರೆ).